×
Ad

ಜಿಎಸ್‌ಟಿಯಲ್ಲೂ ನಕಲಿ ಬಿಲ್ ಜಾಲ: 100 ಕೋ. ರೂ. ವಂಚನೆ ಬೆಳಕಿಗೆ

Update: 2018-02-10 21:56 IST

ಚಂಡೀಗಡ, ಫೆ.10: 100 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಜಿಎಸ್‌ಟಿ ಬಿಲ್ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ ಚಂಢೀಗಡದ ಮಂಡಿ ಗೋಬಿಂದಗಡ ಪ್ರದೇಶದಲ್ಲಿರುವ ವ್ಯಾಪಾರಿಯೋರ್ವರ ಮನೆಗೆ ಪಂಜಾಬ್‌ನ ಅಬಕಾರಿ ಮತ್ತು ತೆರಿಗೆ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫತೇಗಡ ಸಾಹಿಬ್ ಜಿಲ್ಲೆಯಲ್ಲಿರುವ ವ್ಯಾಪಾರಿಯ ಮನೆಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಬಳಿಕ ಬಿಲ್‌ಗಳನ್ನು ಒಳಗೊಂಡಿರುವ 200ಕ್ಕೂ ಹೆಚ್ಚು ಫೈಲ್‌ಗಳು ಹಾಗೂ ಒಂದು ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. ಈ ವ್ಯಾಪಾರಿ ವಂಚನೆ ಪ್ರಕರಣದ ‘ಕಿಂಗ್‌ಪಿನ್’ ಆಗಿದ್ದಾನೆ . ಈತ ಹೊಂದಿರುವ ಮೂರು ಬ್ಯಾಂಕ್ ಖಾತೆಗಳಲ್ಲಿ ಭಾರೀ ಪ್ರಮಾಣದ ಬ್ಯಾಂಕ್ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈತ ನಕಲಿ ಜಿಎಸ್‌ಟಿ ಬಿಲ್ ವ್ಯವಹಾರದಲ್ಲಿ ತೊಡಗಿರುವ ಬಗ್ಗೆ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ನಕಲಿ ಜಿಎಸ್‌ಟಿ ಬಿಲ್ ಪ್ರಕರಣದಲ್ಲಿ ಕೆಲವು ಅಕ್ರಮ ಸಂಸ್ಥೆಗಳು ಬೋಗಸ್ ಜಿಎಸ್‌ಟಿ ಬಿಲ್‌ಗಳನ್ನು ಸಂಸ್ಥೆಗಳಿಗೆ ಪೂರೈಸುವ ಮೂಲಕ ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ಪಡೆಯಲು ನೆರವಾಗುತ್ತವೆ. ಇದರಿಂದ ‘ಲೆಕ್ಕಕ್ಕೆ ಸಿಗದ ’ ರೀತಿಯಲ್ಲಿ ಕೆಲವು ಸರಕುಗಳು ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗುತ್ತದೆ ಹಾಗೂ ಇವನ್ನು ಲೆಕ್ಕಪತ್ರ ಪುಸ್ತಕದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ನಕಲಿ ಜಿಎಸ್‌ಟಿ ಬಿಲ್ ಪೂರೈಸುವ ಸಂಸ್ಥೆಗಳಿಗೆ ಬಿಲ್ ಮೊತ್ತದ ಶೇ.9ರಿಂದ 10 ರಷ್ಟು ಕಮಿಷನ್ ದೊರೆಯುತ್ತದೆ. ಲುಧಿಯಾನ ಮತ್ತು ಮಂಡಿ ಗೋಬಿಂದಗಡ ಪ್ರದೇಶದಲ್ಲಿರುವ ಕಬ್ಬಿಣ ಮತ್ತು ಲೋಹದ ವ್ಯವಹಾರ, ಹೆಣೆದ ಉಡುಪು, ಸಿದ್ಧ ಉಡುಪು ಮುಂತಾದ ಉದ್ದಿಮೆಗಳಲ್ಲಿ ನಕಲಿ ಜಿಎಸ್‌ಟಿ ಬಿಲ್ ದಂಧೆ ಸಕ್ರಿಯವಾಗಿದೆ . ಜಿಎಸ್‌ಟಿ ಮಾಹಿತಿಯನ್ನು ಪರಿಶೀಲಿಸಿದಾಗ ಈ ದಂಧೆ ಬೆಳಕಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಎಸ್‌ಟಿಎನ್ ಮಾಹಿತಿ ಪರಿಶೀಲಿಸಿದಾಗ ಲುಧಿಯಾನದಲ್ಲಿರುವ 100ಕ್ಕೂ ಹೆಚ್ಚು ಸಂಸ್ಥೆಗಳು ನಕಲಿ ಜಿಎಸ್‌ಟಿ ಬಿಲ್ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ. ಅಲ್ಲದೆ ಇವುಗಳಲ್ಲಿ ಬಹುತೇಕ ಸಂಸ್ಥೆಗಳು ನೋಂದಣಿ ಮಾಡಿಕೊಂಡಿರುವ ಸ್ಥಳದಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ ಎಂಬುದೂ ತಿಳಿದು ಬಂದಿದೆ. ಈ ಸಂಸ್ಥೆಗಳಿಗೆ ‘ಶೋಕಾಸ್’ ನೋಟಿಸ್ ಜಾರಿಗೊಳಿಸಲಾಗಿದೆ. ನಕಲಿ ಜಿಎಸ್‌ಟಿ ಬಿಲ್ ಖರೀದಿಸಿದ ಸಂಸ್ಥೆಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ಸಾಗಿದೆ . ವಂಚನೆಯ ಜಾಲವನ್ನು ಬೇಧಿಸಲು ತನಿಖಾ ತಂಡವೊಂದನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News