ಮಾಲ್ದೀವ್ಸ್: ಭಾರತ, ಬ್ರಿಟಿಶ್ ಪತ್ರಕರ್ತರ ಬಂಧನ; ಗಡಿಪಾರು

Update: 2018-02-10 16:49 GMT

ಮಾಲೆ (ಮಾಲ್ದೀವ್ಸ್), ಫೆ. 10: ಓರ್ವ ಭಾರತೀಯ ಸೇರಿದಂತೆ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಲ್ದೀವ್ಸ್‌ನಲ್ಲಿ ಬಂಧಿಸಲ್ಪಟ್ಟ ಜಾಗತಿಕ ಸುದ್ದಿ ಸಂಸ್ಥೆಯೊಂದರ ಇಬ್ಬರು ಪತ್ರಕರ್ತರನ್ನು ಗಡಿಪಾರು ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಹಿಂದೂ ಮಹಾ ಸಾಗರದಲ್ಲಿರುವ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಫೆಬ್ರವರಿ 6ರಂದು ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ, ಪರಿಸ್ಥಿತಿಯನ್ನು ವರದಿ ಮಾಡಲು ಭಾರತೀಯ ಪ್ರಜೆ ಅಮೃತಸರದ ಮನಿ ಶರ್ಮ ಮತ್ತು ಭಾರತ ಸಂಜಾತ ಬ್ರಿಟಿಶ್ ಪ್ರಜೆ ಆತಿಶ್ ರವ್ಜಿ ಪಟೇಲ್ ಅಲ್ಲಿಗೆ ಹೋಗಿದ್ದರು. ಅವರಿಬ್ಬರೂ ಎಎಫ್‌ಪಿ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

 ಅವರನ್ನು ಶುಕ್ರವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಹಾಗೂ ‘‘ಅವರು ವಲಸೆ ಕಾನೂನು ಉಲ್ಲಂಘಿಸಿ ಪ್ರವಾಸಿ ವೀಸಾದಲ್ಲಿ ದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ’’ ಅವರನ್ನು ಈಗ ಗಡಿಪಾರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಅವರ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದು ಮಾಲ್ದೀವ್ಸ್ ಸರಕಾರ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.

‘‘ದೇಶದಲ್ಲಿ ಕೆಲಸ ಮಾಡಲು ಬಯಸುವ ಎಲ್ಲ ವಿದೇಶೀಯರು ವ್ಯಾಪಾರ ಅಥವಾ ಉದ್ಯೋಗ ವೀಸಾ ಪಡೆಯಬೇಕು. ಇದು ಪತ್ರಕರ್ತರಿಗೂ ಅನ್ವಯವಾಗುತ್ತದೆ’’ ಎಂದಿದೆ.

ಜೈಲಿನಲ್ಲಿರುವ ಪ್ರತಿಪಕ್ಷ ನಾಯಕರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಧಿಕ್ಕರಿಸಿರುವ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆ ಹಾಗೂ ಸರಕಾರದ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಬಂಧಿಸಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಲ್ದೀವ್ಸ್ ಸುದ್ದಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News