ಬ್ರಹ್ಮಾವರ: ಕಂಟೈನರ್ ನಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
Update: 2018-02-10 22:22 IST
ಬ್ರಹ್ಮಾವರ, ಫೆ.10: ರಸ್ತೆ ಬದಿ ಚಾಲಕ ವಿಶ್ರಾಂತಿಗಾಗಿ ನಿಲ್ಲಿಸಿದ ಕಂಟೈನರ್ ನಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕೆನರಾ ಗೂಡ್ಸ್ ಆ್ಯಂಡ್ ಟ್ರಾನ್ಸ್‌ಫೋರ್ಟ್‌ನ ಲಾರಿಯ ಚಾಲಕ ಕುಮಾರ ಸ್ವಾಮಿ ಎಂಬವರು ಮಂಗಳೂರಿನಲ್ಲಿರುವ ಶಾಖೆ ಯಿಂದ ಪಾರ್ಸೆಲ್ ವಸ್ತುಗಳನ್ನು ಲಾರಿಗೆ ಲೋಡ್ ಮಾಡಿಕೊಂಡು ಹೊರಟಿದ್ದರು. ಅಂದು ರಾತ್ರಿ 11:30ರ ಸುಮಾರಿಗೆ ಬ್ರಹ್ಮಾವರ ಎಸ್‌ಎಂಎಸ್ ಚರ್ಚ್ ಬಳಿ ಚಾಲಕ, ಲಾರಿಯನ್ನು ನಿಲ್ಲಿಸಿ ವಿಶ್ರಾಂತಿಯನ್ನು ಪಡೆಯುತ್ತಿದ್ದರು.
ಈ ವೇಳೆ ಕಳ್ಳರು ಲಾರಿಯ ಬಾಗಿಲಿಗೆ ಆಳವಡಿಸಿದ ಬೀಗ ಮುರಿದು ಲಾರಿಯ ಒಳಗಿದ್ದ ಬಟ್ಟೆ, ಫ್ಯಾನ್ಸಿ ಐಟಂ, ಆಟದ ಸಾಮಗ್ರಿ, ಚಪ್ಪಲಿ, ಔಷಧಿ, ಪಂಪ್ಸೆಟ್ಟ್, ಗ್ಯಾಸ್ ಸ್ಟ್ಟವ್, ಟ್ಯಾಬ್ ಸೇರಿದಂತೆ ಒಟ್ಟು 1,70,364 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.