ನೆಲ್ಲಿಕಾರು: ಕಟ್ಟಡಗಳಿಗೆ ಶಿಲನ್ಯಾಸ, 94ಸಿ ಹಕ್ಕುಪತ್ರ ವಿತರಣೆ
ಮೂಡುಬಿದಿರೆ, ಫೆ. 10: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರ ಸ್ಥಿತಿಗತಿ ಶೋಚನೀಯವಾಗಿದ್ದು, ವಿವಿಧ ಸವಲತ್ತುಗಳನ್ನು ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ, ನಿಶ್ಯಕ್ತರಿಗೆ ಸಹಾಯ ಮಾಡುವಲ್ಲಿ ನಾವು ಮುಂದಾಗಬೇಕು, 94ಸಿ ಹಕ್ಕುಪತ್ರ ಪಡೆದ ಫಲಾನುಭವಿಗಳ ಮನೆಗೆ ನಳ್ಳಿನೀರು, ವಿದ್ಯುತ್ ಸೌಲಭ್ಯ, ಪಡಿತರ ಚೀಟಿಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಅವರು ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ವಿಕಾಸ ಯೋಜನೆಯ ಕಟ್ಟಡಗಳಿಗೆ ಶಿಲನ್ಯಾಸ ನೆರವೇರಿಸಿ ನಂತರ 84 ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, ಹಾಗೂ ಇತರ ವಿವಿಧ ಯೋಜನೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡುತ್ತ ಸ್ವಂತ ನಿವೇಶನದ ಹಕ್ಕುಪತ್ರಸಿಕ್ಕಿರುವುದು ಎಷ್ಟೋ ವರ್ಷದ ಕನಸು ನನಸಾದಂತಾಗಿದೆ. ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿ ವರ್ಗದವರು ಸಹಕಾರ ನೀಡಿದರೆ ಪ್ರಗತಿಪರವಾದ ಕೆಲಸವಾಗಲು ಸಾಧ್ಯವೆಂದು ತಿಳಿಸಿದರು.
ವೇದಿಕೆಯಲ್ಲಿ ನೆಲ್ಲಿಕಾರು ಗ್ರಾ.ಪಂ ಅಧ್ಯಕ್ಷ ಜಯಂತ್ ಹೆಗ್ಡೆ, ನೆಲ್ಲಿಕಾರು ಗ್ರಾ,ಪಂ ಉಪಾಧ್ಯಕ್ಷೆ ಕುಶಲ ಜಿ.ಪಂ ಸದಸ್ಯೆ ಸುಜಾತ ಕೆ.ಪಿ, ತಾ.ಪಂ ಸದಸ್ಯರಾದ ರೇಖಾ ಸಾಲ್ಯಾನ್, ಪ್ರಶಾಂತ್ ಅಮೀನ್, ಎ.ಪಿ.ಎಮ್,ಸಿ ಸದಸ್ಯ ಪ್ರವೀಣ್ ಕುಮಾರ್ ಜೈನ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ದ.ಕ ಜಿಲ್ಲೆಯಲ್ಲಿ ನೆಲ್ಲಿಕಾರು ಗ್ರಾ.ಪಂ ಅತಿಹೆಚ್ಚು 94ಸಿ ಹಕ್ಕು ಪತ್ರವನ್ನು ಪಡೆದಿದ್ದು ಕಂದಾಯ ಇಲಾಖೆಯ ವತಿಯಿಂದ ಇದನ್ನು ವಿತರಿಸಲಾಗಿದೆ. ಬಡವರು, ಆರ್ಥಿಕವಾಗಿ ದುರ್ಬಲರು ಸರ್ಕಾರಿ ಜಮೀನಿನಲ್ಲಿ ಮನೆಕಟ್ಟಿದ್ದು ಅವರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು. ನೆಲ್ಲಿಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು, ಸಿಬ್ಬಂದಿ ಪ್ರಶಾಂತ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.