×
Ad

ಮಂಗಳೂರು : ಕಾರು ತಡೆದು ಯುವಕ, ಯುವತಿಯೊಂದಿಗೆ ತಂಡದಿಂದ ಅನುಚಿತ ವರ್ತನೆ ಆರೋಪ

Update: 2018-02-10 22:57 IST

ಮಂಗಳೂರು, ಫೆ. 10: ಬರ್ತ್ ಡೇ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಯುವಕ ಮತ್ತು ಯುವತಿ ಪ್ರಯಾಣಿಸುತ್ತಿದ್ದ ಕಾರನ್ನು ಐದು ಮಂದಿಯ ತಂಡವೊಂದು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಯುವತಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಯುವತಿ ಕಡೆಯವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ನೀಡಲಾಗಿದೆ.

ಶುಕ್ರವಾರ ತಡರಾತ್ರಿ ಇಂಡಿಗೊ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಸಹದ್ಯೋಗಿಯೋರ್ವನ ಹುಟ್ಟುಹಬ್ಬ ಪಾರ್ಟಿಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದಾಗ ಅದ್ಯಪಾಡಿಯ ಕ್ರಾಸ್ ರೋಡ್‌ನಲ್ಲಿ ಈ ಘಟನೆ ನಡೆದಿದೆ.

ಅದ್ಯಪಾಡಿಯ ಕ್ರಾಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಕಾರೊಂದು ಪಾರ್ಕ್ ಮಾಡಲಾಗಿತ್ತು. ಕಾರಿನಲ್ಲಿ ಯುವತಿಯೊಂದಿಗೆ ಯುವಕ ಇದ್ದನೆಂದು ಹೇಳಲಾಗಿದೆ. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ತಂಡವೊಂದು ಇವರ ಕಾರನ್ನು ಇಣುಕಿ ನೋಡಿ ಇಬ್ಬರನ್ನೂ ವಿಚಾರಿಸಿದ್ದಾರೆ. ಈ ಸಂದರ್ಭ ತಂಡದವರು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ತಂಡದಲ್ಲಿದ್ದವರು ಬಜ್ಪೆ ಠಾಣೆಗೆ ಪ್ರತಿದೂರು ನೀಡಿ, ಪಾರ್ಕ್ ಮಾಡಲಾಗಿದ್ದ ಕಾರಿನ ಬಗ್ಗೆ ವಿಚಾರಿಸಲು ಹೋಗಿದ್ದ ನಮ್ಮ ಮೇಲೆ ಯುವತಿಯು ಇತರರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬಜ್ಪೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News