ಶಸ್ತ್ರಚಿಕಿತ್ಸೆಯ ಬಳಿಕ ಸಿರಿಂಜ್ ಗಳನ್ನು ಮಹಿಳೆಯ ಹೊಟ್ಟೆಯೊಳಗೇ ಬಿಟ್ಟ ವೈದ್ಯರು!
ವಾರಣಾಸಿ, ಫೆ.11: ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸಿರಿಂಜ್ ಗಳನ್ನು ಆಕೆಯ ಹೊಟ್ಟೆಯಲ್ಲೇ ಬಿಟ್ಟ ಘಟನೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ವಾರಣಾಸಿಯ ಬನಾರಸ್ ಹಿಂದೂ ವಿವಿಯ ಸರ್ ಸುಂದರ್ ಲಾಲ್ ಆಸ್ಪತ್ರೆಯ ವೈದ್ಯರು ಈ ಪ್ರಮಾದ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. 2017ರಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು.
2013ರಲ್ಲಿ ಹೆರಿಗೆ ಸಮಯದಲ್ಲೂ ಹತ್ತಿಯ ತುಂಡುಗಳನ್ನು ವೈದ್ಯರು ತನ್ನ ಹೊಟ್ಟೆಯೊಳಗೆ ಬಿಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. “2017ರಲ್ಲಿ ಶಸ್ತ್ರಚಿಕಿತ್ಸೆ ನಡೆದ ನಂತರ ಆಕೆಗೆ ಹೊಟ್ಟೆನೋವು ಆರಂಭವಾಗಿತ್ತು. ನಿರಂತರ ಇದೇ ಸಮಸ್ಯೆ ಇದ್ದುದರಿಂದ ನಾನು ವೈದ್ಯರಲ್ಲಿಗೆ ಆಕೆಯನ್ನು ಕರೆದುಕೊಂಡು ಹೋದೆ. ಪರೀಕ್ಷಿಸಿದ ವೈದ್ಯರಿಗೆ ಆಕೆಯ ಹೊಟ್ಟೆಯೊಳಗೆ 2 ಸಿರಿಂಜ್ ಗಳು ಲಭಿಸಿತ್ತು. ಕೂಡಲೇ ಎಕ್ಸ್ ರೇ ಮಾಡುವಂತೆ ಸೂಚಿಸಿದ್ದು, ಎಕ್ಸ್ ರೇಯಲ್ಲಿ ಒಟ್ಟು 5 ಸಿರಿಂಜ್ ಗಳು ಪತ್ತೆಯಾಗಿತ್ತು” ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಪ್ರಕರಣವನ್ನು ಮುಖ್ಯ ವೈದ್ಯಕೀಯ ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.