×
Ad

ನ್ಯಾ,ಲೋಯಾ ಹೃದಯಾಘಾತದಿಂದ ಮೃತಪಟ್ಟಿಲ್ಲ

Update: 2018-02-11 17:26 IST

ಹೊಸದಿಲ್ಲಿ, ಫೆ.11: ನ್ಯಾಯಾಧೀಶರಾದ ಭೃಜ್‌ಗೋಪಾಲ್ ಹರಿಕಿಶನ್ ಲೋಯಾ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಮರಣೋತ್ತರ ಸಮೀಕ್ಷೆಯ ವರದಿ ತಿಳಿಸಿದೆ. ಆದರೆ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ಎಂದು ಭಾರತದ ಹಿರಿಯ ವಿಧಿವಿಜ್ಞಾನ ತಜ್ಞರಾದ ಡಾ. ಆರ್.ಕೆ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ ಎಂದು caravanmagazine.in ವರದಿ ಮಾಡಿದೆ. ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿವಿಜ್ಞಾನ ಔಷಧಿ ಮತ್ತು ವಿಷವಿಜ್ಞಾನ ಇಲಾಕೆಯ ಮಾಜಿ ಮುಖ್ಯಸ್ಥ ಮತ್ತು 22 ವರ್ಷಗಳ ಕಾಲ ಭಾರತೀಯ ವೈದ್ಯ-ಕಾನೂನು ತಜ್ಞರ ಮಂಡಳಿಯ ಅಧ್ಯಕ್ಷರಾಗಿದ್ದ ಡಾ. ಆರ್.ಕೆ ಶರ್ಮಾ ಅವರು ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ವಾದವನ್ನು ತಳ್ಳಿಹಾಕಿದ್ದಾರೆ. ದಾಖಲೆಗಳಲ್ಲಿ ಲೋಯಾ ಅವರ ಮಿದುಳಿಗೆ ಆಘಾತವಾಗಿರುವ ಕುರುಹುಗಳಿವೆ ಮತ್ತು ವಿಷ ನೀಡಿರುವ ಸಾಧ್ಯತೆಗಳೂ ಇವೆ ಎಂದು ಶರ್ಮಾ ತಿಳಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಲೋಯಾ ಅವರ ಮರಣೋತ್ತರ ಪರೀಕ್ಷಾ ವರದಿ ಮತ್ತು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲ್ಪಟ್ಟ ಅವರ ಅಂಗಾಂಗಗಳ ಫಲಿತಾಂಶ ವರದಿಯನ್ನು ಶರ್ಮಾ ಅಧ್ಯಯನ ಮಾಡಿದ್ದಾರೆ. ಇವುಗಳಲ್ಲಿ ಕೆಲವು ದಾಖಲೆಗಳನ್ನು ಮಾಹಿತಿ ಹಕ್ಕು ಕಾನೂನಿನಡಿ ಪಡೆದಿದ್ದರೆ ಉಳಿದವುಗಳನ್ನು ಮಹಾರಾಷ್ಟ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಒಪ್ಪಿಸಿದೆ. ಈ ವರದಿಗಳಲ್ಲಿ ಲೋಯಾ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂಬ ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆಯ ವಾದವನ್ನು ಸಮರ್ಥಿಸಲಾಗಿದೆ. ಆದರೆ ಶರ್ಮಾ ಅವರ ಅಭಿಪ್ರಾಯ ಈ ವಾದದ ವಿರುದ್ಧವಾಗಿದೆ.

 ಲೋಯಾ ಅವರ ಮರಣೋತ್ತರ ಪರೀಕ್ಷಾ ವರದಿ ಮತ್ತು ಅಂಗಾಂಗಳ ಪರೀಕ್ಷಾ ವರದಿ ಪರಸ್ಪರ ವಿರೋಧಾಭಾಸವನ್ನು ಹೊಂದಿವೆ. ಸಾವಿಗೆ ಕಾರಣವನ್ನು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೃದಯಾಘಾತ ಎಂದು ತಿಳಿಸಲಾಗಿದ್ದರೆ ಅಂಗಾಂಗ ಪರೀಕ್ಷಾ ವರದಿಯಲ್ಲಿ ತಕ್ಷಣ ಸಂಭವಿಸಿದ ಸಾವು ಎಂದು ಬರೆಯಲಾಗಿದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಮತ್ತು ಅಂಗಾಂಗ ಪರೀಕ್ಷಾ ವರದಿ ಪರಸ್ಪರ ಒಂದೇ ಆಗಿರುತ್ತದೆ. ವಾಸ್ತವದಲ್ಲಿ ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನೇ ಅಂಗಾಂಗ ಪರೀಕ್ಷ ವರದಿಯ ಜೊತೆಗೆ ಜೋಡಿಸಲಾಗಿರುತ್ತದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ.

ಲೋಯಾ ಅವರ ಅಂಗಿಯ ಕಾಲರ್‌ನಲ್ಲಿ ಕಲೆಯಿತ್ತೆಂದು ಈ ಹಿಂದೆಯೇ ಅವರ ಸಹೋದರಿ ಡಾ. ಅನುರಾಧಾ ಬಿಯಾನಿ ಹೇಳಿಕೆ ನೀಡಿದ್ದರು. ಲೋಯಾ ಅವರ ತಂದೆ ಹರಿಕಿಶನ್ ಲೋಯಾ ಕೂಡಾ ತನ್ನ ಮಗನ ಅಂಗಿಯಲ್ಲಿ ರಕ್ತದ ಕಲೆಯನ್ನು ಕಂಡಿರುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಯಾ ಅವರ ತಲೆಗೆ ಏಟು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಆದರೆ ಈ ಬಗ್ಗೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News