×
Ad

ಮಂಗಳೂರು: ಮರಗಳಿಗೆ ರಕ್ಷೆ ಕಟ್ಟಿದ ಪರಿಸರಾಸಕ್ತರು

Update: 2018-02-11 19:21 IST

ಮಂಗಳೂರು, ಫೆ.11: ನಗರದ ಸಿಟಿ ಆಸ್ಪತ್ರೆ ಮುಂಭಾಗದ ತೋಡು ನಿರ್ಮಾಣಕ್ಕಾಗಿ ತೆರವುಗೊಳಿಸಲ್ಪಡಲು ಸಾಧ್ಯತೆಯಿರುವ ಎರಡು ಬೃಹತ್ ಮರಗಳಿಗೆ ನಗರದ ಪರಿಸರಾಸಕ್ತರು ರಕ್ಷೆ ಕಟ್ಟಿ ಮರಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಶಪಥಗೈದ ಘಟನೆ ರವಿವಾರ ನಡೆದಿದೆ.

ಬೃಹದಾಕಾರದಲ್ಲಿ ಬೆಳೆದು ನೆರಳು ನೀಡುತ್ತಿರುವ ಪೆಲ್ಟೋಫಾರ್ಮ್ ಮತ್ತು ದೇವದಾರು ಮರಗಳಿಗೆ ಕೇಸರಿ-ಬಿಳಿ-ಹಸಿರು ಬಣ್ಣದ ಟೇಪ್‌ಗಳನ್ನು ರಕ್ಷೆಯ ಮಾದರಿಯಲ್ಲಿ ಕಟ್ಟಿದರು. ಯಾವುದೇ ಕಾರಣಕ್ಕೂ ಈ ಮರಗಳನ್ನು ಕಡಿಯಲು ಬಿಡಲಾರೆವು, ಅಂತಹ ಪ್ರಯತ್ನ ನಡೆದರೆ ಸತ್ಯಾಗ್ರಹ ನಡೆಸುವುದಾಗಿ ಅಲ್ಲಿ ಸೇರಿದ ನಾಗರಿಕರು ಪ್ರತಿಜ್ಞೆ ಮಾಡಿದರು.

ಈ ಸಂದರ್ಭ ಮಾತನಾಡಿದ ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ಚರಂಡಿ ಅಗಲಗೊಳಿಸುವುದಕ್ಕಾಗಿ ಎರಡು ದೊಡ್ಡ ಮರಗಳನ್ನು ಕಡಿಯಲೇಬೇಕು ಎಂದು ಸ್ಥಳೀಯ ಕಾರ್ಪೊರೇಟರ್ ಹೇಳುತ್ತಿದ್ದಾರೆ. ಆದರೆ ಮರ ಕಡಿಯದೆ ಚರಂಡಿ ಅಗಲಗೊಳಿಸಲು ಬೇಕಾದಷ್ಟು ಅವಕಾಶವಿದೆ. ಹಾಗಾಗಿ ಮರ ಕಡಿಯಲು ಬಿಡುವುದಿಲ್ಲ. ಅನವಶ್ಯಕವಾಗಿ ಮರಗಳನ್ನು ಕಡಿಯುತ್ತ ಹೋದರೆ ನಗರ ಸ್ಮಾರ್ಟ್ ಸಿಟಿಯ ಬದಲು ಸ್ಮಾರಕ ಸಿಟಿಯಾಗುವ ಭೀತಿ ಇದೆ ಎಂದರು.

ಎನ್‌ಇಸಿಎಫ್ ಕಾನೂನು ಸಲಹೆಗಾರ್ತಿ ಸುಮಾ ರಮೇಶ್ ಮಾತನಾಡಿ, ಅಭಿವೃದ್ಧಿಯನ್ನು ನೆಪವಾಗಿಟ್ಟುಕೊಂಡು ಮರ ಕಡಿಯಲು ಪಾಲಿಕೆ ಮುಂದಾಗಿ ರುವುದು ಸರಿಯಲ್ಲ. ಯಾರಿಗೋ ಲಾಭ ಮಾಡುವ ಉದ್ದೇಶ ಇದರ ಹಿಂದಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು. ಎನ್‌ಇಸಿಎಫ್‌ನ ಡೇನಿಯಲ್, ಅನಿತಾ ಭಂಡಾರ್ಕರ್, ಫಾ.ವಾಟ್ಸನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News