ಕೊಹ್ಲಿ ಹಾಗು ನನ್ನ ಸ್ನೇಹವನ್ನು ರಾಜಕೀಯದಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ: ಅಫ್ರಿದಿ

Update: 2018-02-11 15:38 GMT

ಕರಾಚಿ,ಫೆ.11: ಉಗ್ರರ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಕ್ರಿಕೆಟ್ ಸಂಬಂಧಕ್ಕೆ ಧಕ್ಕೆ ಉಂಟಾಗಿದೆ.ಆದರೆ ಕ್ರಿಕೆಟಿಗರು ಮಾತ್ರ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇವರ ನಡುವಿನ ಗೆಳೆತನ ಸಾಕ್ಷಿಯಾಗಿದೆ.

   ‘‘ ನನ್ನ ಮತ್ತು ವಿರಾಟ್ ಕೊಹ್ಲಿ ನಡುವಿನ ಸ್ನೇಹ ಬಾಂಧವ್ಯವನ್ನು ರಾಜಕೀಯದಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಕೊಹ್ಲಿ ಓರ್ವ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಅತ್ಯುತ್ತಮ ವ್ಯಕ್ತಿ. ನನ್ನಂತೆ ಅವರ ದೇಶದ ಕ್ರಿಕೆಟ್ ರಾಯಭಾರಿಯಾಗಿದ್ದಾರೆ ’’ ಎಂದು ಅಫ್ರಿದಿ ಹೇಳಿದ್ದಾರೆ.

  ‘‘ವಿರಾಟ್ ಕೊಹ್ಲಿ ನನ್ನ ಬಗ್ಗೆ ಅಪಾರ ಗೌರವ ಭಾವನೆ ಹೊಂದಿದ್ದಾರೆ. ನನ್ನ ಸಹಾಯಾರ್ಥ ಸಂಸ್ಥೆ (ಶಾಹಿದ್ ಅಫ್ರಿದಿ ಫೌಂಡೇಶನ್) ನಿಧಿ ಸಂಗ್ರಹಕ್ಕಾಗಿ ಹಸ್ತಾಕ್ಷರದ ಜೆರ್ಸಿಯೊಂದನ್ನು ಅವರು ನೀಡಿದ್ದಾರೆ’’

‘‘ಶಾಹಿದ್ ಅಫ್ರಿದಿ ಫೌಂಡೇಶನ್ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ’’ಎಂದು ಅಫ್ರಿದಿ ಹೇಳಿದ್ದಾರೆ.

‘‘ವಿರಾಟ್ ಅವರೊಂದಿಗೆ ಮಾತನಾಡಲು ಯಾವಾಗಲೂ ಅವಕಾಶ ಸಿಗುವುದು ಕಡಿಮೆ. ಕೆಲವೊಮ್ಮೆ ಅವರು ಸಂದೇಶ ಕಳುಹಿಸುತ್ತಾರೆ. ನಾನೂ ಅವರಿಗೆ ಸಂದೇಶ ಕಳುಹಿಸುತ್ತಿರುವೆ. ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದಾಗ ನಾನು ಶುಭ ಹಾರೈಸಿದ್ದೆ ’’ ಎಂದು ಅಫ್ರಿದಿ ಮಾಹಿತಿ ನೀಡಿದ್ದಾರೆ.

     ‘‘ ವ್ಯಕ್ತಿಗಳ ನಡುವಿನ ಉತ್ತಮ ಸಂಬಂಧ ದೇಶಗಳ ನಡುವೆ ಸೌಹಾರ್ದ ಸಂಬಂಧ ಬೆಳೆಯಲು ನೆರವಾಗುತ್ತದೆ ಎಂದು ಹೇಳಿರುವ ಅಫ್ರಿದಿ ನನಗೆ ಪಾಕಿಸ್ತಾನ ಬಳಿಕ ಭಾರತ ಮತ್ತು ಆಸ್ಟ್ರೇಲಿಯದಲ್ಲಿ ಅತೀ ಹೆಚ್ಚಿನ ಗೌರವ ನೀಡುವ ಮತ್ತು ನನ್ನನ್ನು ಪ್ರೀತಿಸುವ ಅಭಿಮಾನಿಗಳಿದ್ದಾರೆ’’ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News