ವಿಮಾನ, ರೈಲಿನಲ್ಲಿ ಅಕ್ರಮ ಚಿನ್ನ ಸಾಗಾಟ: 1.22 ಕೋಟಿ ರೂ. ಮೊತ್ತದ ಚಿನ್ನ ವಶ
ಮಂಗಳೂರು, ಫೆ. 11: ವಿಮಾನ ಹಾಗೂ ರೈಲಿನ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಎರಡು ಪ್ರಕರಣಗಳನ್ನು ಪತ್ತೆಹಚ್ಚಿರುವ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆರೋಪಿಗಳಿಂದ ಒಟ್ಟು 1.22 ಕೋಟಿ ರೂ. ಮೊತ್ತದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಆರೋಪಿಗಳಿಂದ 4 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಹಸನ್ ಮತ್ತು ಸಮೀರಾ ದಂಪತಿ ಸುಮಾರು 66 ಲಕ್ಷ ರೂ. ಮೌಲ್ಯದ 2.13 ಕೆಜಿ ಚಿನ್ನವನ್ನು ಬೆಲ್ಟ್‌ನೊಳಗೆ ಜೋಡಿಸಿ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದ ಈ ದಂಪತಿಯನ್ನು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಅಕ್ರಮ ಚಿನ್ನ ಪತ್ತೆಯಾಗಿದೆ. ಕಂದು ಬಣ್ಣದ ಬೆಲ್ಟ್ ಆಕಾರದ ಪಟ್ಟಿಯೊಳಗೆ ಚಿನ್ನವನ್ನು ಪೋಣಿಸಿ ಸಾಗಾಟ ಮಾಡಲಾಗುತ್ತಿತ್ತು. ವಶಪಡಿಸಿಕೊಳ್ಳಲಾದ ಈ ಚಿನ್ನ 23.99 ಕ್ಯಾರೆಟ್‌ನದ್ದಾಗಿತ್ತು. ಚಿನ್ನದ ಒಟ್ಟು ತೂಕ 2,137.04 ಗ್ರಾಂ ಆಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.
ರೈಲಿನ ಮೂಲಕ ಅಕ್ರಮ ಸಾಗಾಟ
ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಇನ್ನೊಂದು ಪ್ರಕರಣ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಪನ್ವೇಲ್‌ನಿಂದ ಕೋಝಿಕ್ಕೋಡ್‌ಗೆ ತೆರಳುವ ಮರುಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಬ್ಬರ ಬಳಿ 56,33,880 ರೂ. ಮೌಲ್ಯದ 16 ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. ಇದರ ಒಟ್ಟು ತೂಕ 1,865.600 ಗ್ರಾಂ ಆಗಿದೆ. ಆರೋಪಿಗಳಾದ ಮೊಯ್ದಿನ್ ಮತ್ತು ಸಂಶುದ್ದೀನ್ ಯಾವುದೇ ದಾಖಲೆ ಇಲ್ಲದೆ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರಿಂದ ಕಂದಾಯ ಗುಪ್ತಚರ ಇಲಾಖಾ ಅಧಿಕಾರಿಗಳು ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಅಧಿಕಾರಿಗಳು ರೈಲು ನಿಲ್ದಾಣದಲ್ಲಿ ಹೊಂಚು ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.