ತಿಂಗಳೊಳಗೆ ಮಹಿಳಾ, ಮಕ್ಕಳ ದೌರ್ಜನ್ಯ ಕುರಿತ ಅಂತಿಮ ವರದಿ ಸಲ್ಲಿಕೆ: ಉಗ್ರಪ್ಪ
ಉಡುಪಿ, ಫೆ.11: ರಾಜ್ಯದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿಯು ಈ ಕುರಿತು ಸಿದ್ಧಪಡಿಸುತ್ತಿರುವ ಅಂತಿಮ ವರದಿಯನ್ನು ಒಂದು ತಿಂಗಳಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ರವಿವಾರ ನಡೆದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಮಧ್ಯಂತರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಇದರ ನಂತರವೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಕುರಿತ ಪ್ರಾಮುಖ್ಯತೆ ರಾಜ್ಯದ ಅನೇಕ ಭಾಗಗಳಲ್ಲಿ ದೊರೆತಿಲ್ಲ. ಸಮಾಜದಲ್ಲಿ ಶೇ. 50 ಮಹಿಳೆಯರಿದ್ದರೆ, ಮಕ್ಕಳ ಪ್ರಮಾಣ ಶೇ.38ರಷ್ಟಿದೆ. ಸಮಾಜ ಬಹುಸಂಖ್ಯಾತ ರಾಗಿರುವ ಇವರಿಗೆ ಸೂಕ್ತ ಪ್ರಾಧಾನ್ಯತೆ, ರಕ್ಷಣೆ ಸಿಕ್ಕಿಲ್ಲ. ಅಧಿಕಾರಿಗಳು ಬದ್ಧತೆ ಯಿಂದ ಕೆಲಸ ಮಾಡಿದರೆ ದೌರ್ಜನ್ಯ ನಿಯಂತ್ರಿಸಲು ಸಾಧ್ಯವಿದೆ ಎಂದರು.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿ ರಾಷ್ಟ್ರೀಯ ನೀತಿಯನ್ನು ರೂಪಿಸಿ, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಇದರಿಂದ ಈ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಇತ್ಯರ್ಥ ಪಡಿಸಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸ್ಥೈರ್ಯ ನಿಧಿಯಲ್ಲಿ ಈ ವರ್ಷ 9 ಮಂದಿಗೆ 2.25 ಲಕ್ಷ ರೂ. ವಿತರಿಸಲಾಗಿದೆ 3 ತಿಂಗಳಿಗೊಮ್ಮೆ ಸಾಂತ್ವನ ಸಮಿತಿ ಸಭೆ ನಡೆಸಲಾ ಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿ ದರು. ದೌರ್ಜನ್ಯಕ್ಕೆ ಒಳಗಾದವರಿಗೆ ತುರ್ತು ಪರಿಹಾರವಾಗಿ 25ಸಾವಿರ ರೂ. ನೀಡಬೇಕು. ಆದರೆ ಅದನ್ನು ಜಿಲ್ಲಾಡಳಿತ ಯಾರಿಗೂ ನೀಡಿಲ್ಲ ಎಂದು ಉಗ್ರಪ್ಪ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೋನ್ಸಾ ಲಿಸ್ ಉತ್ತರದಿಂದ ಅಸಮಾಧಾನಗೊಂಡ ಉಗ್ರಪ್ಪ, ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ನಿರ್ಭಯ ಕಾಯಿದೆ ಬಗ್ಗೆ ಯಾವುದೇ ಅಧಿಕಾರಿಗಳು ಓದಿಲ್ಲ. ನಿರ್ಭಯ ನಿಧಿಯಿಂದ ಉಡುಪಿಯಲ್ಲಿ ನಯಾ ಪೈಸೆ ಬಳಕೆ ಮಾಡಿಕೊಂಡಿಲ್ಲ. ಯಾಕೆ ಈ ನಿಧಿಯನನು ಬಳಕೆ ಮಾಡಿ ಕೊಂಡಿಲ್ಲ. ನಾವು ಬಂದು ಇಲ್ಲಿ ಅರಣ್ಯ ರೋಧನ ಮಾಡಬೇಕು ಎಂದು ಅವರು ಹೇಳಿದರು.
ನಿರ್ಭಯ ನಿಧಿ ಬಗ್ಗೆ ಜಿಲ್ಲಾಡಳಿತ ಜನರಲ್ಲಿ ಜಾಗೃತಿಯೇ ಮೂಡಿಸಿಲ್ಲ. ಬಡವರ ಜೊತೆ ಚೆಲ್ಲಾಟ ಆಡುವ ಕೆಲಸ ಮಾಡಬೇಡಿ. ಮುಂದುವರೆದ ಜಿಲ್ಲೆಯಲ್ಲೇ ಈ ರೀತಿಯಾದರೆ ಹೇಗೆ. ಉಡುಪಿ ಜಿಲ್ಲಾ ಪರಿಹಾರ ಎಂಬುದು ಸಂಪೂರ್ಣ ಮರಿಚೀಕೆಯಾಗಿದೆ. ನಿರ್ಭಯ ಕಾನೂನನ್ನು ಅಧಿಕಾರಿಗಳು ಓದಿ ಕೊಳ್ಳಬೇಕು. ಇಲ್ಲದಿದ್ದರೆ ಕೃಷ್ಣನೆ ಕಾಪಾಡಬೇಕು ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಂರಕ್ಷಣಾಧಿಕಾರಿ ಹುದ್ದೆ ಇಲ್ಲ: ಜಿಲ್ಲೆಯಲ್ಲಿ ಸಂರಕ್ಷಣಾಧಿಕಾರಿಗಳ ಬಗ್ಗೆ ಸಮಿತಿ ಸದಸ್ಯೆ ಜ್ಯೋತಿ ಪ್ರಶ್ನೆಗೆ ಉತ್ತರಿಸಿದ ಗ್ರೇಸಿ ಗೋನ್ಸಾಲಿಸ್, ಜಿಲ್ಲೆಗೆ ಈ ಹುದ್ದೆ ಮಂಜೂರಾಗಿಲ್ಲ. ಸಿಡಿಪಿಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ ಎಂದರು.
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ಅವರು, ಈ ವಿಷಯ ಸರಕಾರದ ಗಮನಕ್ಕೆ ತರಬೇಕು. ತಾಲೂಕಿಗೆ ಒಬ್ಬರು ಸಂರಕ್ಷಣಾಧಿಕಾರಿಗಳು ಇರಬೇಕು. ಇಲ್ಲದಿದ್ದರೆ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನ ತರಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸಮಾಜ ಸೇವಕಿ ರಾಧದಾಸ್ ಮಾತನಾಡಿ, ಕುಂದಾಪುರಕ್ಕೆ ವಾರಕ್ಕೆ ಎರಡು ಬಾರಿ ಉಸ್ತುವಾರಿಯಾಗಿ ಸಂರಕ್ಷಣಾಧಿಕಾರಿಗಳು ಬರುತ್ತಿದ್ದು, ಇದ ರಿಂದ ತೀರಾ ಸಮಸ್ಯೆಯಾಗುತ್ತಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಹಿಳೆ ಮೇಲೆ ನಡೆ ಯುವ ದೌರ್ಜನ್ಯ ಕುರಿತಂತೆ ವಿಶಾಖಾ ಮಾರ್ಗಸೂಚಿಯನ್ವಯ ಪ್ರತಿ ಇಲಾಖೆಯಲ್ಲಿ ಸಮಿತಿಯನ್ನು ರಚಿಸಬೇಕು ಎಂದು ಸೂಚಿಸಿದ ಉಗ್ರಪ್ಪ, ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳಿಗೆ ನೀಡಬೇಕಾದ ಗರಿಷ್ಠ ಪರಿ ಹಾರದ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ಹೊಂದಿರುವಂತೆ ಹಾಗೂ ಪರಿಹಾರ ಪಡೆಯುವ ಕುರಿತಂತೆ ಸಾರ್ವತ್ರಿಕ ಅರಿವು ಕಾರ್ಯಕ್ರಮ ಗಳನ್ನು ಏರ್ಪಡಿಸಬೇಕು ಎಂದರು.
ಬಾಲನ್ಯಾಯ ಮಂಡಳಿ, ವರದಕ್ಷಿಣೆ ವಿರುದ್ದ ದಾಖಲಾಗುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು. ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳಿಗೆ ಸಿಸಿಟಿವಿ ಅಳವಡಿಸಿ, ಬಿಸಿಯೂಟದಲ್ಲಿ ನೀಡುವ ಆಹಾರ ಪದಾರ್ಥಗಳ ನಿಯಮಿತ ಪರೀಕ್ಷೆ ನೆಡೆಸಿ, ಪ್ರಸವ ಲಿಂಗ ಪತ್ತೆ ಮಾಡುವ ಕೇಂದ್ರಗಳ ಕುರಿತು ನಿಗಾ ವಹಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಜ್ಯೋತಿ ಹಾಗೂ ಚಂದ್ರವೌಳಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರ್ಗಿ ಹಾಗೂ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪೋಕ್ಸೋ: ಮೂರು ಪ್ರಕರಣಗಳಲ್ಲಿ ಶಿಕ್ಷೆ!
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 122 ಪ್ರಕರಣಗಳಲ್ಲಿ 22 ಪ್ರಕರಣಗಳು ಇತ್ಯರ್ಥ ಗೊಂಡಿದ್ದು, ಅದರಲ್ಲಿ ಮೂರು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆ ಯಾಗಿದೆ ಎಂದು ಪೋಕ್ಸೊ ವಿಶೇಷ ಅಭಿಯೋಜಕ ವಿಜಯ ಪೂಜಾರಿ ಸಭೆಗೆ ತಿಳಿಸಿದರು.
ಶಿಕ್ಷೆ ಪ್ರಕರಣ ತೀರಾ ಕಡಿಮೆ ಆಗಿರುವ ಬಗ್ಗೆ ಉಗ್ರಪ್ಪ ಅಸಮಾಧಾನ ತೋಡಿ ಕೊಂಡರು. ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ಗಳಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸ ಬೇಕು. ಜಿಲ್ಲೆಯಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಈ ಕುರಿತಂತೆ ಕಾನೂನಿನ ಸಮಗ್ರ ಮಾಹಿತಿ ಹೊಂದಿರಬೇಕು ಎಂದು ಅವರು ಹೇಳಿದರು.