×
Ad

ಹೊಸ ಬೆಂಗಳೂರು-ಕಾರವಾರ ರಾತ್ರಿ ರೈಲಿಗೆ ಸ್ವಾಗತ

Update: 2018-02-11 22:43 IST

ಉಡುಪಿ, ಫೆ.11: ಹೊಸ ಬೆಂಗಳೂರು -ಮಂಗಳೂರು -ಕಾರವಾರ ರಾತ್ರಿ ರೈಲಿಗೆ ಇಂದು ಬೆಳಗ್ಗೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಉಡುಪಿ ರೈಲ್ವೆಯ ಯಾತ್ರಿ ಸಂಘದ ವತಿಯಿಂದ ಭವ್ಯ ಸ್ವಾಗತ ಮತ್ತು ಸಂಭ್ರಮದ ಹರ್ಷಾಚರಣೆಯನ್ನು ನಡೆಸಲಾಯಿತು.

ರೈಲು ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತಲುಪಿದಾಗ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ನೇತೃತ್ವದಲ್ಲಿ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಚೆಂಡೆವಾದನದಿಂದ ಸ್ವಾಗತಿಸಿ ಮತ್ತು ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಿಸಲಾಯಿತು. ಬಳಿಕ ಮಾತನಾಡಿದ ಆರ್.ಎಲ್.ಡಯಾಸ್, ಈ ಬಾರಿಯ ರೈಲ್ವೆ ಬಜೆಟ್ನಲ್ಲಿ ರಾಜ್ಯದ ಸಬ್ಅರ್ಬನ್ ರೈಲು ಅಭಿವೃದ್ಧಿಗೆ ಹೇರಳವಾಗಿ ಅನುದಾನಗಳನ್ನು ಘೋಷಣೆ ಮಾಡಲಾಗಿದೆ. ರೈಲ್ವೆ ಇಲಾಖೆ ಶೀಘ್ರದಲ್ಲಿ ರೈಲ್ವೆ ಹಳಿಗಳನ್ನು ದ್ವಿಪಥಗೊಳಿಸಿ, ಮಂಗಳೂರಿನಿಂದ ಕಾರವಾರ ವರೆಗೆ ಲೋಕಲ್ ರೈಲುಗಳನ್ನು ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿ ಕಾರಿ ರಾಮಚಂದ್ರ ಆಚಾರ್ಯ, ನಿರ್ದೇಶಕರುಗಳಾದ ಜನಾರ್ದನ ಕೋಟಿ ಯನ್, ಶೇಖರ್ ಕೋಟಿಯನ್, ಸದಾನಂದ ಅಮೀನ್, ಸುಂದರ್ ಕೋಟಿ ಯನ್, ಜಾನ್ ರೆಬೆಲ್ಲೊ, ಸದಸ್ಯರುಗಳಾದ ಕಮಲಾಕ್ಷ ಕೆ., ಸತೀಶ್ ಕದಿಕೆ, ಕೊಂಕಣ್ ರೈಲ್ವೆಯ ಕಮರ್ಷಿಯಲ್ ಸೂಪರ್‌ವೈಸಾರ್‌ಗಳಾದ ಸತೀಶ್ ಹೆಗ್ಡೆ ಮತ್ತು ರಮೇಶ್ ಶೆಟ್ಟಿ, ವಿಭಾಗ ಅಭಯಂತರರಾದ ಥಾಮಸ್ ಮತ್ತು ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲೂ ಸ್ವಾಗತ: ಕಾರವಾರ- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಕುಂದಾಪುರ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ರವಿವಾರ ಕುಂದಾಪುರದ ರೈಲ್ವೇ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು. 

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ರೈಲಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಲಕ್ಷ್ಮಿ ಮಂಜು ಬಿಲ್ಲವ, ಜ್ಯೋತಿ ನಾಯ್ಕ, ಕಿಶೋರ್ ಕುಮಾರ್, ಕುಂದಾಪುರ ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಕುಂದಾಪುರ ರೋಟರಿ ಕ್ಲಬ್‌ನ ಅಧ್ಯಕ್ಷ ಗಣೇಶ್ ಐತಾಳ್, ಪ್ರಕಾಶ್ ಆಚಾರ್ಯ, ನಾಗರಾಜ್ ದೇವಾಡಿಗ, ನಾಗರಾಜ ಆಚಾರ್ ಮೊದಲಾದ ವರು ಉಪಸ್ಥಿತರಿದ್ದರು.
ಈ ಹೊಸ ರೈಲು ಗುರುವಾರ, ಶುಕ್ರವಾರ, ಶನಿವಾರ, ರವಿವಾರ ಸಂಚರಿಸ ಲಿದ್ದು, ಬೆಂಗಳೂರಿನಿಂದ ರಾತ್ರಿ 7.15ಕ್ಕೆ ಹೊರಟರೆ, ಮರುದಿನ ಬೆಳಗ್ಗೆ 6ಗಂಟೆಗೆ ಮಂಗಳೂರು, 7.52ಕ್ಕೆ ಉಡುಪಿ, 8.06ಕ್ಕೆ ಬಾರ್ಕೂರು, 8.22ಕ್ಕೆ ಕುಂದಾಪುರ, 9.12ಕ್ಕೆ ಬೈಂದೂರು, 12.30ಕ್ಕೆ ಕಾರವಾರ ತಲುಪಲಿದೆ. ಉಳಿದ ದಿನಗಳಾದ ಸೋಮವಾರ, ಮಂಗಳವಾರ, ಬುಧವಾರ ಮೈಸೂರು ಮಾರ್ಗ ವಾಗಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೇ ವಲಯಾಧಿಕಾರಿ ಎಚ್.ಎಂ. ದಿನೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News