ಮಧ್ಯಪ್ರದೇಶದಲ್ಲಿ ಒಬಿಸಿ ಒಗ್ಗಟ್ಟಿಗೆ ಪ್ರಯತ್ನ: ಅಲ್ಪೇಶ್ ಠಾಕೂರ್

Update: 2018-02-12 13:53 GMT

ಭೋಪಾಲ್, ಫೆ.12: ಈ ವರ್ಷಾಂತ್ಯ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಡಲು ಎಲ್ಲಾ ಹಿಂದುಳಿದ ವರ್ಗದವರನ್ನು ಒಗ್ಗೂಡಿಸಲು ತಾನು ಪ್ರಯತ್ನಿಸುವುದಾಗಿ ಗುಜರಾತ್‌ನಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಸಮುದಾಯದ ಪ್ರತಿನಿಧಿಯಾಗಿರುವ ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ಹೇಳಿದ್ದಾರೆ.

ಕಳೆದ ವರ್ಷ ಗುಜರಾತ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ಪ್ರಧಾನ ಮುಖವಾಗಿದ್ದ ಅಲ್ಪೇಶ್, ಮಧ್ಯಪ್ರದೇಶದಲ್ಲಿ ಒಬಿಸಿ ವರ್ಗದವರಿಗೆ ಸಾಂವಿಧಾನಿಕ ಹಕ್ಕುಗಳನ್ನು ವಂಚಿಸಲಾಗಿದೆ. ಮಧ್ಯಪ್ರದೇಶದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರನ್ನು ಒಂದೇ ವೇದಿಕೆಯಡಿ ತರಲು ಪ್ರಯತ್ನಿಸಲಾಗುವುದು. ಮೂರು ತಿಂಗಳೊಳಗೆ ರಾಜ್ಯದಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ಸರಕಾರಿ ಉದ್ಯೋಗದಲ್ಲಿ ಒಬಿಸಿಗಳಿಗೆ ಶೇ.27ರಷ್ಟು ಮೀಸಲಾತಿಯಿದೆ. ಆದರೂ ಈ ಸಮುದಾಯದವರು ಇನ್ನೂ ಹಿಂದುಳಿದಿದ್ದು ಇವರ ಸಾಂವಿಧಾನಿಕ ಹಕ್ಕುಗಳನ್ನು ವಂಚಿಸಲಾಗಿದೆ ಎಂದು ಅಲ್ಪೇಶ್ ಹೇಳಿದ್ದಾರೆ. ಮಧ್ಯಪ್ರದೇಶದ ಒಬಿಸಿ ಯುವಜನತೆ ಸಂಘಟನೆಯೊಂದನ್ನು ಆರಂಭಿಸಿದ್ದು ಇದು 29 ವಿಧಾನಸಭಾ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿದೆ. ಶೀಘ್ರವೇ ಎಲ್ಲಾ ಕ್ಷೇತ್ರಗಳಿಗೂ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದ ಅಲ್ಪೇಶ್, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಒಬಿಸಿ ಸಮುದಾಯದವರನ್ನು ಮರೆತೇ ಬಿಟ್ಟಿದ್ದಾರೆ . ಒಬಿಸಿ ಸಮುದಾಯದವರಿಗೆ ಏನನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News