ಚುನಾವಣಾ ಕಾರ್ಯತಂತ್ರ ಬದಲಿಸಲು ಮಾಯಾವತಿ ನಿರ್ಧಾರ

Update: 2018-02-12 13:57 GMT

ಲಕ್ನೊ, ಫೆ.12: ಯುವಜನತೆ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಾಧಾನ್ಯತೆ ನೀಡುವ ಮೂಲಕ ಮಹತ್ವದ 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಕಾರ್ಯತಂತ್ರವನ್ನು ಬದಲಾಯಿಸಲು ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ನಾಯಕಿ ಮಾಯಾವತಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

      ಬಿಎಸ್‌ಪಿ ಪಕ್ಷದ ಪ್ರಮುಖ ಆಧಾರಸ್ಥಂಭವಾಗಿರುವ ದಲಿತರನ್ನು ಒಳಗೊಂಡಿರುವ ‘ಸರ್ವ ಸಮಾಜ’ ಸೂತ್ರವನ್ನು ಮುಂದಿರಿಸಿಕೊಂಡು ಚುನಾವಣೆ ಎದುರಿಸಲು ಪಕ್ಷದ ನಾಯಕಿ ಮಾಯಾವತಿ ನಿರ್ಧರಿಸಿದ್ದಾರೆ. ಜೊತೆಗೆ, ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾಧ್ಯತೆಯಿರುವ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗೆ ಪಕ್ಷ ನಡೆಸಿರುವ ಸಿದ್ಧತಾ ಕಾರ್ಯದ ಪುನರವಲೋಕನ ನಡೆಸುವ ಸಲುವಾಗಿ ಪಕ್ಷದ ಹಿರಿಯ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಆಗಿರುವ ಸತತ ಸೋಲು, ಹಿರಿಯ ಮುಖಂಡರ ಬಂಡಾಯ, ಸಂಘಟನೆಯಲ್ಲಿ ಯುವಜನರಿಗೆ ಆದ್ಯತೆ ನೀಡದಿರುವುದು, ಪಶ್ಚಿಮ ಉ.ಪ್ರದೇಶದಲ್ಲಿ ಚಂದ್ರಶೇಖರ್ ನೇತೃತ್ವದಲ್ಲಿ ಭೀಮ್ ಸೇನೆ ಅಸ್ತಿತ್ವಕ್ಕೆ ಬಂದಿರುವುದು, ಧರ್ಮಪ್ರಚಾರಕ ಕಾರ್ಯಕರ್ತರನ್ನು ಕಡೆಗಣಿಸಿರುವುದು ಮುಂತಾದ ವಿಷಯಗಳು ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಉಡುಗಿಸಿರುವ ಕಾರಣ ಪಕ್ಷದ ಸಂಘಟನೆಯನ್ನು ಬುಡಮಟ್ಟದಿಂದ ಮರು ರಚಿಸಲು ಮಾಯಾವತಿ ನಿರ್ಧರಿಸಿದ್ದಾರೆ.

  ಚುನಾವಣೆಗೂ ಮುನ್ನ ಬೂತ್ ಸಮಿತಿಗಳನ್ನು ರಚಿಸಲಾಗುವುದು. ದಲಿತರ ಜೊತೆಗೆ ಹಿಂದುಳಿದ ವರ್ಗಗಳ ಸದಸ್ಯರು, ಮೇಲ್ವರ್ಗದ ಸದಸ್ಯರು, ಮುಸ್ಲಿಂ ಸಮುದಾಯದವರಿಗೂ ಸಮಿತಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು. ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡುವ ನಿಷ್ಠಾವಂತ ಕಾರ್ಯಕರ್ತರಿಗೂ ಸಂಘಟನೆಯಲ್ಲಿ ಅವಕಾಶ ನೀಡಿ, ಟಿಕೆಟ್ ಹಂಚಿಕೆ ಸಂದರ್ಭ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ರಾಜ್ಯದಾದ್ಯಂತ ಶಿಬಿರಗಳನ್ನು ಆಯೋಜಿಸಿ, ಜನರ ಪ್ರತಿಕ್ರಿಯೆ ಪಡೆಯುವಂತೆ ಹಾಗೂ ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ.

  ನೋಟು ರದ್ದತಿ, ಜಿಎಸ್‌ಟಿ ಅನುಷ್ಠಾನ, ನಿರುದ್ಯೋಗ,ಕೃಷಿ ವಲಯದ ಬಿಕ್ಕಟ್ಟು, ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವುದು, ರಾಜಕಾರಣಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದು ಇತ್ಯಾದಿಗಳಿಂದ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಪಕ್ಷದ ಮುಖಂಡರು ಧ್ವನಿ ಎತ್ತಬೇಕು. ಉ.ಪ್ರದೇಶದಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕಾರ್ಯನಿರ್ವಹಿಸಬೇಕು. ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‌ಗಡದಲ್ಲಿ ಸರಕಾರ ರಚಿಸುವಲ್ಲಿ ಪಕ್ಷವು ನಿರ್ಣಾಯಕ ಪಾತ್ರ ವಹಿಸುವಂತಹ ಸಾಧನೆ ತೋರಬೇಕಿದೆ ಎಂದು ಮಾಯಾವತಿ ತಿಳಿಸಿದ್ದಾರೆ.

 ಆಡಳಿತ ಪಕ್ಷವು ಇವಿಎಂ(ವಿದ್ಯುನ್ಮಾನ ಮತಯಂತ್ರ)ಗಳನ್ನು ಮತ್ತೆ ತಿರುಚುವ ಸಾಧ್ಯತೆ ಇದ್ದು ಈ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಪಕ್ಷದ ಮುಖಂಡರಿಗೆ ಅವರು ಕರೆ ನೀಡಿದರು. 2019ರ ಲೋಕಸಭಾ ಚುನಾವಣೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಚುನಾವಣಾ ಮೈತ್ರಿ ಮಾಡಿಕೊಳ್ಳುವ ವಿಷಯದ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News