ಲಿಂಗ ಛೇದನ ಪ್ರಕರಣ: ಗುರ್ಮೀತ್ ಸಿಂಗ್ ವಿರುದ್ಧ ಸಮನ್ಸ್

Update: 2018-02-12 14:05 GMT

ರೋಹ್ಟಕ್, ಫೆ.12: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಡೇರಾ ಸಾಚಾ ಸೌಧಾದ ಮುಖ್ಯಸ್ಥ ಗುರ್ಮಿತ್ ಸಿಂಗ್ ಹಾಗೂ ಇತರ ಇಬ್ಬರ ವಿರುದ್ಧ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದ್ದು ಲಿಂಗ ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 28ರಂದು ಹಾಜರಾಗುವಂತೆ ಸೂಚಿಸಿದೆ.

ಸದ್ಯ ಗುರ್ಮೀತ್ ರೊಹ್ಟಕ್‌ನ ಸುನರಿಯಾ ಜೈಲಿನಲ್ಲಿ ಬಂಧಿಯಾಗಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ಇರುವ ಭದ್ರತಾ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯವು ಗುರ್ಮಿತ್‌ನನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ಸುನರಿಯಾ ಜೈಲಿನ ವರಿಷ್ಠಾಧಿಕಾರಿಯವರಿಗೆ ಸೂಚಿಸಿದ್ದಾರೆ. ಗುರ್ಮಿತ್ ಈಗಾಗಲೇ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಂಚಕುಲಾ ಜಿಲ್ಲಾ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತಿದ್ದಾನೆ.

400 ಭಕ್ತರಿಗೆ ಒತ್ತಾಯಪೂರ್ವಕವಾಗಿ ಲಿಂಗ ಛೇದನ ನಡೆಸಿದ ಪ್ರಕರಣದಲ್ಲಿ ಗುರ್ಮಿತ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾರೆ. ಸಿರ್ಸಾದಲ್ಲಿರುವ ಡೇರಾದಲ್ಲಿರುವ ಆಸ್ಪತ್ರೆಯ ಉದ್ಯೋಗಿಗಳಾದ ಡಾ. ಪಂಕಜ್ ಗರ್ಗ್ ಮತ್ತು ಡಾ. ಎಂ.ಪಿ ಸಿಂಗ್ ಈ ಪ್ರಕರಣದ ಇತರ ಆರೋಪಿಗಳಾಗಿದ್ದಾನೆ ಎಂದು ಸಿಬಿಐ ಆರೋಪಿಸಿದೆ.

ಲಿಂಗ ಛೇದನ ಮಾಡಿಸುವ ಮತ್ತು ತಮ್ಮ ಸಂಪತ್ತನ್ನು ತ್ಯಜಿಸುವ ಮೂಲಕ ದೇವರನ್ನು ಕಾಣಬಹುದು ಎಂದು ಗುರ್ಮೀತ್ ತನ್ನ ಭಕ್ತರನ್ನು ನಂಬಿಸುತ್ತಿದ್ದ ಆನಂತರ ಅವರನ್ನು ಮಹಿಳಾ ಭಕ್ತರ ರಕ್ಷಣೆಗಾಗಿ ನೇಮಿಸುತ್ತಿದ್ದ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಆರೋಪಿಸಿದೆ.

ಇತರ ಇಬ್ಬರು ಆರೋಪಿಗಳಾದ ಡಾ. ಪಂಕಜ್ ಗರ್ಗ್ ಮತ್ತು ಡಾ. ಎಂ.ಪಿ ಸಿಂಗ್ ವೈಯಕ್ತಿಕವಾಗಿ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ನ್ಯಾಯಾಧೀಶರು ಸೂಚಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಗರ್ಗ್ ನ್ಯಾಯಾಲಯದ ಸಮನ್ಸ್ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಆಗಸ್ಟ್ 25ರಂದು ಪಂಚಕುಲಾ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಜನವರಿ 7ರಂದು ಬಂಧನಕ್ಕೊಳಗಾಗಿದ್ದ ಡಾ. ಎಂ.ಪಿ ಸಿಂಗ್ ಅಲಿಯಾಸ್ ಮಹೇಂದರ್ ಇನ್ಸಾನ್ ಸದ್ಯ ಅಂಬಾಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News