ಉಡುಪಿ; ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
ಉಡುಪಿ, ಫೆ.12: ಜಂತುಹುಳ ಬಾಧೆಯಿಂದ ಮಕ್ಕಳು ರೋಗಗ್ರಸ್ತ ರಾಗದಂತೆ ತಡೆಯಲ ಆಲ್ಬಂಡರೆಲ್ ಮಾತ್ರೆ ನೀಡುವುದರ ಮೂಲಕ ಜಂತುಹುಳ ನಿವಾರಣೆ ಮಾಡಬಹುದು ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಹೇಳಿದ್ದಾರೆ.
ಸೋಮವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಿಂದ ಎಲ್‌ವಿಪಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಿಂದೆ ಅನೇಕ ರೋಗಗಳು ಸಾವಿನೆಡೆಗೆ ಸೆಳೆದುಕೊಂಡು ಹೋಗುತ್ತಿದ್ದವು. ಆದರೆ ವಿಜ್ಞಾನದ ಕ್ರಾಂತಿಯಿಂದ ಸರಕಾರದ ಸಹಕಾರದಿಂದ ಎಲ್ಲವೂ ಬದಲಾಗಿದೆ. ಸಾಂಕ್ರಾಮಿಕ ರೋಗದಿಂದ ಮುಂದಿನ ಜನಾಂಗವನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿರುವ 1ರಿಂದ 19 ವರ್ಷದೊಳಗಿನ ವಯೋಮಾನದವರಿಗೆ ಆಲ್ಬೆಂಡರೆಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಜಂತುಹುಳು ಭಾದೆಯಿಂದ ರಕ್ಷಣೆ ದೊರೆಯುತ್ತದೆ. ಮಕ್ಕಳಲ್ಲಿ ರಕ್ತಹೀನತೆ, ಪೌಷ್ಠಿಕತೆಯನ್ನು ಸುಧಾರಿಸಲು ಒಟ್ಟು 2,54,832 ಮಕ್ಕಳಿಗೆ ಆಲ್ಬೆಂಡರೆಲ್ ಮಾತ್ರೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋಪಾಲಪುರ ವಾರ್ಡ್ ಕೌನ್ಸಿಲರ್ ಚಂದ್ರಕಾಂತ್, ರೋಟರಿ ಕ್ಲಬ್‌ನ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಲಸಿಕಾ ಕಾರ್ಯದರ್ಶಿ ಐ.ಕೆ.ಜಯಚಂದ್ರ, ಆರ್‌ಸಿಹೆಚ್ ಅಧಿಕಾರಿ ಡಾ. ಎಂ.ಜಿ.ರಾಮ ಮತ್ತಿತರರು ಉಪಸ್ಥಿತರಿದ್ದರು.