ಮಂಗಳೂರು ವಿವಿ ಮಟ್ಟದ ‘ಸಂಸ್ಕೃತ ಸೌರಭಮ್’ ಸ್ಪರ್ಧೆ ಉದ್ಘಾಟನೆ

Update: 2018-02-12 15:06 GMT

ಉಡುಪಿ, ಫೆ.12: ಸಂಸ್ಕೃತ ಭಾಷೆಯ ಪದಗಳಲ್ಲಿ ಯಾವುದೇ ಬದಲಾವಣೆಗೆ ಅವಕಾಶ ಇಲ್ಲ. ಅನಾದಿ ಕಾಲದಿಂದಲೂ ಮುಂದೆ ಎಷ್ಟು ವರ್ಷ ಕಳೆದರೂ ಸಂಸ್ಕೃತ ಭಾಷೆ ಬದಲಾಗುವುದಿಲ್ಲ ಎಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನಲ್ಲಿ ಆಯೋಜಿಸಲಾದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಮಟ್ಟದ ವಿವಿಧ ಸಂಸ್ಕೃತ ಸ್ಪರ್ಧೆ ‘ಸಂಸ್ಕೃತ ಸೌರಭಮ್’ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂಸ್ಕೃತ ಭಾಷೆಯು ಯಾವುದೇ ಪದ ಬದಲಾವಣೆಯಾಗದೆ ಸಂಸ್ಕೃತಿಯ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಈ ರೀತಿಯ ಸಾಮರ್ಥ್ಯ ಬೇರೆ ಯಾವುದೇ ಭಾಷೆಗೆ ಇಲ್ಲ. ಇತರೆ ಭಾಷೆಗಳಲ್ಲಿ ಕಾಲದಿಂದ ಕಾಲಕ್ಕೆ ವಸ್ತುವಿನ ಪದ ಬಳಕೆ ಬದಲಾವಣೆ ಕಂಡಿದೆ ಎಂದು ಅವರು ತಿಳಿಸಿದರು.

ಬೆಂಗಳೂರು ಸಂಸ್ಕೃತ ಭಾರತಿ ಅಖಿಲ ಭಾರತೀಯ ಪ್ರಚಾರ ಪ್ರಕಾಶ ಪ್ರಮುಖ ಸತ್ಯನಾರಾಯಣ ಮಾತನಾಡಿ, ದೇಶದ ಸಂವಿಧಾನ ರಚನೆ ಸಂದರ್ಭ ಡಾ.ಬಿ.ಆರ್.ಅಂಬೇಡ್ಕರ್ ಫೆಡರಲ್ ಕಮಿಟಿ ಸಭೆಯಲ್ಲಿ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸುವ ಕುರಿತು ಮಾತುಕತೆ ನಡೆಸಿ ಅನುಮೋದನೆಗೆ ಪ್ರಸ್ತಾಪಿಸಿದ್ದರು. ಆದರೆ ವ್ಯಕ್ತಿಯೊಬ್ಬರ ಆಕ್ಷೇಪದಿಂದ ಅದನ್ನು ಕೈಬಿಡಲಾಗಿತ್ತು. ಈ ಕಾರಣಕ್ಕೆ ಆ ವ್ಯಕ್ತಿ ಮುಂದೆ ಪಶ್ಚಾತ್ತಾಪ ಪಟ್ಟಿದ್ದರು ಎಂದರು.

ಇಂದು ದೇಶದಲ್ಲಿ ಸಂಸ್ಕೃತ ಅಧ್ಯಯನಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಈ ಮೂಲಕ ನಮ್ಮ ಸಂಸ್ಕೃತದ ಹಿರಿಮೆ ಹೆಚ್ಚುತ್ತಿದೆ. ಸಂಸ್ಕೃತ ಮಾತೃಭಾಷೆಯಾಗಿ ದ್ದಾಗ ನಾವು ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ದ್ದೆವು. ಈ ನಿಟ್ಟಿನಲ್ಲಿ ಸಂಸ್ಕೃತ ನಮ್ಮ ಮಾತೃಭಾಷೆಯಾಗಿ ಬದಲಾಬೇಕು ಎಂದು ಅವರು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರ ಶೇಖರ್, ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ರಮೇಶ ಟಿ.ಎಸ್. ಸ್ವಾಗತಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News