×
Ad

ಕಾರ್ಕಳ: ಚೂರಿ ಇರಿತ ಪ್ರಕರಣಕ್ಕೆ ಹೊಸ ತಿರುವು

Update: 2018-02-12 20:53 IST

ಕಾರ್ಕಳ, ಫೆ. 12: ಇಲ್ಲಿನ ಅಂಗಡಿಯೊಂದರಲ್ಲಿ ನಡೆದ ಚೂರಿ ಇರಿತ ಪ್ರಕರಣ ಹೊಸ ತಿರುವು ಪಡೆದಿದ್ದು, ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಶನಿವಾರ ನವ ವಿವಾಹಿತನ ಮೇಲೆ ನಡೆದ ಚೂರಿ ಇರಿತ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ದುರ್ಗ ಗ್ರಾಮದ ನಾಗೇಶ್ ಆಚಾರ್ಯ ಕಳೆದ ಡಿಸೆಂಬರ್‌ನಲ್ಲಿ ಎಲ್ಲೂರು ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಈ ಹಿಂದೆ ಆಕೆಯನ್ನು ಸ್ಥಳೀಯ ನಿವಾಸಿ ಅವಿನಾಶ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಆತ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿವಾಹವಾಗುವುದಾಗಿ ಆಕೆಯೊಂದಿಗೆ ತಿಳಿಸಿದ್ದ. ಆತನ ವರ್ತನೆಗೆ ಬೇಸತ್ತ ಯುವತಿ ಹಿರಿಯರ ಒಪ್ಪಿಗೆಯಂತೆ ದುರ್ಗ ಗ್ರಾಮದ ನಾಗೇಶ್ ಆಚಾರ್ಯರನ್ನು ವಿವಾಹವಾಗಿದ್ದಳು. ಈ ವಿವಾಹವನ್ನು ಸಹಿಸಲಾಗದ ಅವಿನಾಶ್ ಪದೇ ಪದೇ ನಾಗೇಶ್ ಆಚಾರ್ಯರಿಗೆ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ. ವಿವಾಹ ನಿಶ್ಚಿತಾರ್ಥದ ಬಳಿಕವೂ ಕೂಡ ಹಲವು ಬಾರಿ ಕರೆ ಮಾಡಿ ಮದುವೆಯಾಗದಂತೆ ಎಚ್ಚರಿಕೆ ನೀಡಿದ್ದ ಎಂದು ತಿಳಿದುಬಂದಿದ್ದು, ಅವಿನಾಶ್ ಜೈಲಿನಲ್ಲಿದ್ದುಕೊಂಡೇ ದೂರವಾಣಿ ಮೂಲಕ ಹಾಗೂ ತನ್ನ ಸಹಚರರ ಮೂಲಕ ಹಲವು ಬಾರಿ ಬೆದರಿಕೆಯೊಡ್ಡಿದ್ದ. ಬೆದರಿಕೆಗೆ ಅಂಜದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಿರುವುದಾಗಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ನಾಗೇಶ್ ಆಚಾರ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News