ಸೇನಾ ಮೇಜರ್ ವಿರುದ್ಧದ ತನಿಖೆಗೆ ಸುಪ್ರೀಂ ತಡೆ
ಹೊಸದಿಲ್ಲಿ, ಫೆ, 12: ಮೂರು ನಾಗರಿಕರನ್ನು ಬಲಿಪಡೆದುಕೊಂಡ ಶೋಪಿಯಾನ ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ಸೇನೆಯ ಅಧಿಕಾರಿಯೊಬ್ಬರ ವಿರುದ್ಧ ನಡೆಯುತ್ತಿರುವ ತನಿಖೆಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರದಂದು ತಡೆ ವಿಧಿಸಿದೆ. ಸೇನಾ ಮೇಜರ್ ಆದಿತ್ಯ ಕುಮಾರ್ ಅವರ ತಂದೆ ನಿವೃತ್ತ ಕರ್ನಲ್ ಕರಮ್‌ವೀರ್ ಸಿಂಗ್, ತನ್ನ ಮಗ ಕೇವಲ ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದ. ಹಾಗಾಗಿ ಅವನ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಸರಕಾರ ದಾಖಲಿಸಿರುವ ಎಫ್‌ಐಆರ್‌ನ್ನು ರದ್ದುಪಡಿಸಬೇಕು ಎಂದು ಕಳೆದ ವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಈ ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಘನ ನ್ಯಾಯಾಲಯವು ಸೇನಾಧಿಕಾರಿಗಳ ವಿರುದ್ಧ ಯಾವುದೇ ರೀತಿಯ ದಬ್ಬಾಳಿಕೆಯ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಜನವರಿ 27ರಂದು ಶೋಪಿಯಾನದಲ್ಲಿ ಪ್ರತಿಭಟನಾಕಾರರ ಮೇಲೆ ಸೇನೆಯು ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಗರ್ವಾಲ್ ರೈಫಲ್ಸ್‌ನ ಯೋಧರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಮೇಜರ್ ಆದಿತ್ಯ ಕುಮಾರ್ ಇದೇ ಸೇನಾ ವಿಭಾಗದ ಸದಸ್ಯರಾಗಿದ್ದರು.
ಗರ್ವಾಲ್ ವಿಭಾಗವು ಕೊಲೆ, ಹತ್ಯಾಯತ್ನ ಮತ್ತು ಜೀವವನ್ನು ಅಪಾಯಕ್ಕೊಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಫೆಬ್ರವರಿ 1ರಂದು ಸೇನೆ ತನ್ನ ಸ್ಪಷ್ಟೀಕರಣವನ್ನು ನೀಡಿತ್ತು. ತಮ್ಮ ಅಧಿಕಾರಿಯ ಮೇಲೆ ಉದ್ವಿಗ್ನ ಗುಂಪು ಹಲ್ಲೆ ನಡೆಸಲು ಮುಂದಾದಾಗಿ ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತು ವಾಹನಗಳಿಗೆ ಬೆಂಕಿ ಹಚ್ಚಲು ಆರಂಭಿಸಿದಾಗ ನಮ್ಮನ್ನು ನಾವು ರಕ್ಷಿಸುವ ಸಲುವಾಗಿ ಗುಂಡಿನ ದಾಳಿ ನಡೆಸಿರುವುದಾಗಿ ಸೇನೆ ತಿಳಿಸಿತ್ತು.
ಸೈನಿಕರ ಹಕ್ಕುಗಳ ರಕ್ಷಣೆಗೆ ಸರಿಯಾದ ನಿಯಮಗಳನ್ನು ರೂಪಿಸಬೇಕು ಮತ್ತು ಯೋಧರು ತಮ್ಮ ಕರ್ತವ್ಯವನ್ನು ನಿಭಾಯಿಸಿದ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ತಡೆಯುವ ಸಲುವಾಗಿ ಸದ್ಯದ ಪ್ರಕರಣದಲ್ಲಿ ಪರಿಹಾರವನ್ನೂ ಒದಗಿಸಬೇಕು ಎಂದು ಸಿಂಗ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.