17 ಮೂಳೆ ಮುರಿತಕ್ಕೊಳಗಾಗಿ ಜೀವನ್ಮರಣ ಹೋರಾಟ ನಡೆಸಿದ್ದ ಅಥ್ಲೀಟ್‌ಗೆ ಒಲಿಂಪಿಕ್ಸ್ ಪದಕ!
ಪಿಯೊಂಗ್‌ಚಾಂಗ್(ದಕ್ಷಿಣಕೊರಿಯಾ), ಫೆ.12: ಹನ್ನೊಂದು ತಿಂಗಳ ಹಿಂದೆ ಸ್ನೋಬೋರ್ಡಿಂಗ್ ಘಟನೆಯಲ್ಲಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಕೆನಡಾದ ಮಾರ್ಕ್ ಮೆಕ್ ಮೊರಿಸ್ ರವಿವಾರ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿ ವಿಶ್ವದ ಗಮನ ಸೆಳೆದಿದ್ದಾರೆ.
24ರ ಹರೆಯದ ಮೆಕ್‌ಮೊರಿಸ್ 2017ರ ಮಾರ್ಚ್‌ನಲ್ಲಿ ಕೆನಡಾದಲ್ಲಿ ಫಿಲ್ಮ್ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಕೆಲಸದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ನಡೆದ ಭೀಕರ ಸ್ನೋ ಬೋರ್ಡಿಂಗ್ ಘಟನೆಯಲ್ಲಿ ಮರವೊಂದಕ್ಕೆ ಢಿಕ್ಕಿಯಾಗಿ ದವಡೆ, ಬಲಗೈ, ಕಿಡ್ನಿ ಹಾಗೂ ಪಕ್ಕೆಲುಬು ಸಹಿತ ದೇಹದ 17 ಭಾಗ ಮೂಳೆ ಮುರಿತಕ್ಕೊಳಗಾಗಿದ್ದಲ್ಲದೆ, ಶ್ವಾಸಕೋಶದ ಸಮಸ್ಯೆಗೆ ಸಿಲುಕಿ ಎರಡು ದಿನಗಳ ಕಾಲ ವೈದ್ಯಕೀಯ ಪ್ರೇರಿತ ಕೋಮಾದಲ್ಲಿದ್ದರು.
ಜೀವನ್ಮರಣ ಹೋರಾಟದಲ್ಲಿ ಬದುಕುಳಿದ ಮೆಕ್ ಮೊರಿಸ್ ಪಿಯೊಂಗ್‌ಚಾಂಗ್ ವಿಂಟರ್ ಗೇಮ್ಸ್‌ನ ಪುರುಷರ ಸ್ನೋಬೋರ್ಡ್ ಸ್ಲೋಪ್‌ಸ್ಟೈಲ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಕೆನಡಾದ ಮ್ಯಾಕ್ ಪ್ಯಾರೊಟ್ ಹಾಗೂ ಅಮೆರಿಕದ ರೆಡ್ ಗೆರಾರ್ಡ್ ಬೆಳ್ಳಿ ಹಾಗೂ ಚಿನ್ನ ಜಯಿಸಿದ್ದಾರೆ.
ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಮೆಕ್‌ಮೊರಿಸ್ ಇದೀಗ ಕಂಚು ಜಯಿಸಿ ರಾತೋರಾತ್ರಿ ಮುಖಪುಟದ ಸುದ್ದಿಯಾಗಿದ್ದಾರೆ.
‘‘ಇಂದು ನಾನು ಹಳೆಯ ಘಟನೆಯನ್ನು ನೆನಪಿಸಿಕೊಳ್ಳಲು ಇಷ್ಟಪಡಲಾರೆ. ಇಂದು ಸ್ನೋ ಬೋರ್ಡ್‌ನಲ್ಲಿ ನಿಂತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. 8 ತಿಂಗಳ ಹಿಂದೆ ನನಗೆ ಸ್ನೋಬೋರ್ಡ್‌ನಲ್ಲಿರುತ್ತೇನೆಂದು ಯೋಚಿಸಿಯೇ ಇರಲಿಲ್ಲ. ಬದುಕುಳಿಯುವ ಭರವಸೆಯೂ ಇರಲಿಲ್ಲ. ನಾನು ಗೆದ್ದಿರುವ ಕಂಚು ನನ್ನ ಪಾಲಿಗೆ ಚಿನ್ನದ ಪದಕವಾಗಿದೆ’’ ಎಂದು ಮೆಕ್ ಮೊರಿಸ್ ಹೇಳಿದ್ದಾರೆ.
ಮೆಕ್ ಮೊರಿಸ್ 2014ರ ಸೋಚಿ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. ‘ಮೆಕ್‌ಮೊರಿಸ್ ಸಾಧನೆ ಅದ್ಭುತ’ ಎಂದು ಅಮೆರಿಕದ ಸ್ಕೈ ಕ್ವೀನ್ ಲಿಂಡ್ಸೆ ವಾನ್ ಟ್ವೀಟ್ ಮಾಡಿದ್ದಾರೆ.