×
Ad

'ಮೊಬೈಲ್ ಆನ್ ಇಟ್ಟು ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ'

Update: 2018-02-12 22:08 IST

ಉಡುಪಿ, ಫೆ.12: ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ಅಡಚಣೆಗಳು ಆಗಬಾರದು. ಪಿಡಿಒಗಳು ಮೊಬೈಲ್‌ಗಳನ್ನು ಸ್ವಿಚ್‌ಆಫ್ ಮಾಡದೆ ನೀರಿಗೆ ಸಂಬಂಧಿಸಿದ ದೂರಿಗೆ ಕೂಡಲೇ ಸ್ಪಂದಿಸಬೇಕು. ಸಾರ್ವಜನಿಕರಿಂದ ಬರುವ ದೂರುಗಳನ್ನು ಕಚೇರಿಯಲ್ಲಿ ನೋಂದಾವಣಿ ಮಾಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ ನೀಡಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೋಮವಾರ ಉಡುಪಿ ತಾಪಂ ಸಭಾಂಗಣದಲ್ಲಿ ಕರೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡುತಿದ್ದರು.

ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಫೆ.15ರಂದು ಟೆಂಡರ್ ಕರೆದು ಫೆ.23ರೊಳಗೆ ಎಲ್ಲ ಪ್ರಕ್ರಿಯೆ ಮುಗಿಸಲಾಗು ವುದು. ಅದರ ನಂತರ ಯಾವುದೇ ಗ್ರಾಮಗಳಲ್ಲಿ ನೀರಿನ ಅಗತ್ಯ ಕಂಡು ಬಂದರೆ ಟ್ಯಾಂಕರಿನ ಮೂಲಕ ನೀರು ಒದಗಿಸುವ ಕಾರ್ಯ ಮಾಡಲಾಗು ವುದು ಎಂದು ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದರು.

ಕಳೆದ ಬಾರಿ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳ ವಿವರವನ್ನು ಪಿಡಿಒ ಗಳ ಮೂಲಕ ಪಡೆದುಕೊಂಡ ಸಚಿವರು, ಟ್ಯಾಂಕರ್ ಅಥವಾ ತುರ್ತು ಕಾಮ ಗಾರಿಗಳ ಮೂಲಕ ಜನರಿಗೆ ನೀರು ಪೂರೈಕೆ ಮಾಡುವ ಕಾರ್ಯ ಮಾಡಬೇಕು ಎಂದು ತಿಳಿಸಿದರು. ಕೆಲವು ಕಡೆ ನೀರಿನ ಸಮಸ್ಯೆ ಬಗೆಹರಿದಿರುವುದರಿಂದ ಟ್ಯಾಂಕರ್ ಬಳಕೆ ಅಗತ್ಯ ಇಲ್ಲ ಎಂದು ಅವರು ಹೇಳಿದರು.

ನೀರಿನ ಪೂರೈಕೆಗೆ ಸಂಬಂಧಿಸಿ ಪ್ರತಿವರ್ಷ ಕಾರ್ಯಪಡೆಗೆ 40ಲಕ್ಷ ರೂ. ಅನುದಾನ ಬರುತ್ತದೆ. ಪಿಡಿಒಗಳು ಬೇಡಿಕೆ ಇರುವ ಗ್ರಾಮಗಳ ಪಟ್ಟಿಯನ್ನು ತಕ್ಷಣವೇ ನೀಡಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಯಪಡೆಯಲ್ಲಿ 1.20ಕೋಟಿ ರೂ. ಅನುದಾನ ಬಳಕೆ ಮಾಡಲಾಗಿದೆ ಎಂದರು.

ನಗರಸಭೆ ಪೂರ್ವಸಿದ್ಧತೆ: ಉಡುಪಿ ನಗರಕ್ಕೆ ನೀರು ಒದಗಿಸುವ ಬಜೆ ಅಣೆಕಟ್ಟಿನಲ್ಲಿ ಇಂದು 5.7 ಮೀಟರ್ ಮತ್ತು ಶಿರೂರು ಅಣೆಕಟ್ಟಿನಲ್ಲಿ 0.7 ಮೀಟರ್ ಸೇರಿದಂತೆ ಒಟ್ಟು 6.4 ಮೀಟರ್ ನೀರಿನ ಸಂಗ್ರಹ ಇದ್ದು, ಇದು ಕಳೆದ ಬಾರಿಗಿಂತ ಹೆಚ್ಚಿದೆ ಎಂದು ನಗರಸಭೆ ಪರಿಸರ ಇಂಜಿನಿಯರ್ ರಾಘವೇಂದ್ರ ಸಭೆಗೆ ಮಾಹಿತಿ ನೀಡಿದರು.

ಈಗ ಕೊಡುವ ರೀತಿಯಲ್ಲೇ ನೀರು ಕೊಟ್ಟರೆ ಎಪ್ರಿಲ್ 15ಕ್ಕೆ ನೀರು ಕಡಿಮೆ ಆಗುತ್ತದೆ. ಅದಕ್ಕೆ ಕಳೆದ ಬಾರಿಯ ಎರಡು ವಲಯದ ಬದಲು ಮೂರು ವಲಯಗಳನ್ನಾಗಿ ಮಾಡಿ ನೀರು ಪೂರೈಸುವ ಕೆಲಸ ಮಾಡಲಾಗುತ್ತದೆ. ಮಳೆ ಗಾಲ ಆರಂಭ ಆಗುವವರೆಗೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗು ವುದು. ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಲು ನಗರಸಭೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಫೆ.14ರ ನಂತರ ಅಗತ್ಯ ಇದ್ದ ಕಡೆ ಟ್ಯಾಂಕರ್ ನೀರನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಬಜೆಯಲ್ಲಿ ಎರಡು ಗಂಟೆ ವಿದ್ಯುತ್ ವ್ಯತ್ಯಯ ಆದರೂ ಮೂರು ದಿನ ನೀರು ಸರಬರಾಜಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿ ದರು. ಎಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬಜೆಯ ನೀರು ಪೂರೈಕೆ ಪಂಪ್‌ಗೆ 24ಗಂಟೆಗಳ ಕಾಲ ವಿದ್ಯುತ್ ಒದಗಿಸಬೇಕು ಎಂದು ಸಚಿವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವ ಪ್ರಮೋದ್ ಮಾತನಾಡಿ, ವಾರಾಹಿಯಿಂದ ಬಜೆಗೆ ನೀರು ತರುವ 270 ಕೋಟಿ ರೂ. ಮೊತ್ತದ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಎರಡೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಇಷ್ಟು ಮೊತ್ತದ ಕಾಮಗಾರಿ ನಡೆಯುವಾಗ ವಿರೋಧ, ಪ್ರತಿಭಟನೆಗಳು ಸ್ವಾಭಾವಿಕ. ಗ್ರಾಮೀಣ ಪ್ರದೇಶ ದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಜಿಲ್ಲಾಡಳಿತ ಮಾತುಕತೆ ನಡೆಸಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ನೀಡಲಿದೆ ಎಂದರು.

ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ಚಂದ್ರ, ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ ಉಪಸ್ಥಿತರಿದ್ದರು.

ಬಹುಗ್ರಾಮ ಯೋಜನೆ ಅಂತಿಮ ಹಂತದಲ್ಲಿ

37ಕೋಟಿ ರೂ. ಅನುದಾನದ ತೆಂಕನಿಡಿಯೂರು ಮತ್ತು 57 ಕೋಟಿ ರೂ. ಅನುದಾನದ ಚಾಂತಾರು ಬಹುಗ್ರಾಮ ಯೋಜನೆ ಇದೀಗ ಅಂತಿಮ ಹಂತ ದಲ್ಲಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಮಾತನಾಡಿದ್ದೇನೆ. ಈ ಯೋಜನೆ ಜಾರಿಯಾದರೆ ಇಡೀ ಉಡುಪಿ ವಿಧಾನಸಭಾ ಕ್ಷೇತ್ರ ವರ್ಷ ಇಡೀ 24ಗಂಟೆಗಳ ನೀರು ನೀಡಲು ಸಾಧ್ಯವಾಗುತ್ತದೆ. ಉಳಿದ ನಾಲ್ಕು ಗ್ರಾಮಗಳಿಗೆ ಜೋಮ್ಲು ತೀರ್ಥದಿಂದ ನೀರು ಒದಗಿಸಲು ಕ್ರಮ ತೆಗೆದುಕೊಳಳಲಾಗುವುದು ಎಂದರು.

ಫೆ.27ರಂದು ನಗರಸಭೆಯ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿ ರುವ ಎ ಪಟ್ಟಿಯಲ್ಲಿರುವ 575 ಕುಟುಂಬಗಳಿಗೆ ಹೆರ್ಗದಲ್ಲಿ ಗುರುತಿಸಿರುವ ಜಾಗದಲ್ಲಿ ಟೋಕನ್ ನಂಬರ್ ಕೊಟ್ಟು ಲಾಟರಿ ಮೂಲಕ ನಿವೇಶನ ನೀಡಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News