ಉತ್ತರ ಭಾರತೀಯರ ವಿರುದ್ಧ ಅವಹೇಳನಕಾರಿ ಹೇಳಿಕೆ
ಮುಂಬೈ, ಫೆ.12: ಗೋವಾಕ್ಕೆ ಉತ್ತರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದನ್ನು ಆಕ್ಷೇಪಿಸಿ ಗೋವಾದ ಸಚಿವ ವಿಜಯ್ ಸರ್ದೇಸಾಯಿ ನೀಡಿರುವ ಹೇಳಿಕೆಯನ್ನು ಶಿವಸೇನೆ ಖಂಡಿಸಿದೆ.
ಗೋವಾಕ್ಕೆ ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಉತ್ತರ ಭಾರತೀಯರು ಗೋವಾದಲ್ಲಿ ಹರ್ಯಾಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸರ್ದೇಸಾಯಿ ಟೀಕಿಸಿದ್ದರು. ಅಲ್ಲದೆ ಗೋವಾಕ್ಕೆ ಭೇಟಿ ನೀಡುವ ದೇಶೀಯ ಪ್ರವಾಸಿಗರು ಭೂಮಿಯ ಕಲ್ಮಶಗಳಾಗಿದ್ದಾರೆ ಎಂದೂ ಹೇಳಿದ್ದರು.
ಈ ಹೇಳಿಕೆಯನ್ನು ಖಂಡಿಸಿ, ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಲೇಖನ ಬರೆದಿರುವ ಶಿವಸೇನೆ, ಪೋರ್ಚ್‌ಗೀಸ್ ಆತ್ಮಾಭಿಮಾನ ಹೊಂದಿರುವ ಸರ್ದೇಸಾಯಿಯಂತಹ ರಾಜಕಾರಣಿಗಳ ಬೆಂಬಲದಿಂದ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರ ಪಡೆದಿದೆ. ಇವರಿಗೆ ಪೋರ್ಚ್‌ಗೀಸರು ಒಳ್ಳೆಯವರು, ಪೋರ್ಚ್‌ಗೀಸ್‌ರ ಗುಲಾಮರಾಗಿರುವುದೂ ಸ್ವಾಗತಾರ್ಹ. ಆದರೆ ಉತ್ತರ ಭಾರತೀಯರು ಸ್ವಾಗತಾರ್ಹರಲ್ಲ. ಬಿಜೆಪಿ ಸರಕಾರದ ಸಚಿವನೋರ್ವ ಉತ್ತರ ಭಾರತದ ಪ್ರವಾಸಿಗರಿಂದಾಗಿ ಗೋವಾವು ತ್ಯಾಜ್ಯಗುಂಡಿಯಾಗಿಬಿಟ್ಟಿದೆ ಎಂದು ಹೇಳಿದ್ದಾರೆ. ಈ ಕಲ್ಮಶವನ್ನು ಸ್ವಚ್ಛಗೊಳಿಸಲು ಸರಕಾರ ಯಾಕೆ ಮುಂದಾಗುತ್ತಿಲ್ಲ ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ.
ಪ್ರವಾಸೋದ್ಯಮವು ಗೋವಾಕ್ಕೆ ಆದಾಯದ ಪ್ರಮುಖ ಮೂಲವಾಗಿದೆ. ಪ್ರವಾಸಿಗರನ್ನು ಸ್ವಾಗತಿಸದಿದ್ದರೆ ರಾಜ್ಯಕ್ಕೆ ಆದಾಯ ಬರುವುದು ಹೇಗೆ. ಕೇವಲ ತೆಂಗಿನಕಾಯಿ, ಫೆನ್ನಿಗಳನ್ನು ಮಾರಿ ಆದಾಯ ಕ್ರೋಢೀಕರಣ ಸಾಧ್ಯವೇ. ಇವನ್ನು ಮಾರಬೇಕಿದ್ದರೂ ಪ್ರವಾಸಿಗಳು ಬೇಕಲ್ಲವೇ ಎಂದು ಪ್ರಶ್ನಿಸಲಾಗಿದೆ.
ಗೋವಾದಲ್ಲಿ ರಶ್ಯ ಹಾಗೂ ನೈಜೀರಿಯಾದ ಡ್ರಗ್ ಮಾಫಿಯಾಗಳಿಂದ ಸಮಸ್ಯೆ ಸೃಷ್ಟಿಯಾಗಿದೆ. ಗೋವಾದ ಅರ್ಧಾಂಶದಷ್ಟು ಬೀಚ್‌ಗಳು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿಬಿಟ್ಟಿದೆ. ಹಲವು ಗ್ರಾಮಗಳಲ್ಲಿ ರಶ್ಯ ಮತ್ತು ನೈಜೀರಿಯಾದ ಧ್ವಜಗಳೂ ಹಾರಾಡುತ್ತಿವೆ. ಈ ಗ್ರಾಮಗಳಲ್ಲಿ ದುಷ್ಕೃತ್ಯ ಸಂಭವಿಸಿದರೂ ಪೊಲೀಸರು ಪ್ರವೇಶಿಸಲಾಗದ ಪರಿಸ್ಥಿತಿಯಿದೆ . ಈ ಸಮಸ್ಯೆಯನ್ನು ನಿವಾರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಪತ್ರಿಕೆ ಟೀಕಿಸಿದೆ.
ಮಹಾರಾಷ್ಟ್ರದೊಂದಿಗೆ ವಿಲೀನವಾಗುವುದನ್ನು ತಪ್ಪಿಸಿಕೊಂಡು 50 ವರ್ಷ ಕಳೆದರೂ ಇದೀಗ ಗೋವಾದಲ್ಲಿ ಸ್ಥಳೀಯರಲ್ಲದ ಜನರ ಅಸ್ತಿತ್ವ ಹೆಚ್ಚಾಗಿದ್ದು ಗೋವಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದು ಗೋವಾ ಸಚಿವ ವಿಜಯ್ ಸರ್ದೇಸಾಯಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.