ವಿಶ್ವಸಂಸ್ಥೆ ನಿಷೇಧಿತ ಉಗ್ರ ಗುಂಪುಗಳ ವಿರುದ್ಧ ಕ್ರಮಕ್ಕೆ ಪಾಕ್ ಅಧ್ಯಾದೇಶ

Update: 2018-02-12 17:05 GMT

ಇಸ್ಲಾಮಾಬಾದ್, ಫೆ. 12: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಕ್ಕೆ ಒಳಗಾಗಿರುವ ಲಷ್ಕರ್ ಎ ತೊಯ್ಬಾ, ಅಲ್-ಖಾಯ್ದಿ ಮತ್ತು ತಾಲಿಬಾನ್‌ನಂತಹ ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ನಿಯಂತ್ರಿಸುವ ಉದ್ದೇಶದ ಅಧ್ಯಾದೇಶವೊಂದಕ್ಕೆ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೈನ್ ಸಹಿ ಹಾಕಿದ್ದಾರೆ.

ಈ ಅಧ್ಯಾದೇಶವು ಭಯೋತ್ಪಾದನೆ ನಿಗ್ರಹ ಕಾಯ್ದೆ (ಎಟಿಎ)ಯ ವಿಧಿಯೊಂದಕ್ಕೆ ತಿದ್ದುಪಡಿ ತರುತ್ತದೆ. ಆ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷೇಧಿಸಿರುವ ಭಯೋತ್ಪಾದಕ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತವೆ ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಸೋಮವಾರ ವರದಿ ಮಾಡಿದೆ.

ಈ ತಿದ್ದುಪಡಿಯನ್ನು ಬಳಸಿಕೊಂಡು ಅಧಿಕಾರಿಗಳು ಈ ಭಯೋತ್ಪಾದಕ ಸಂಘಟನೆಗಳ ಕಚೇರಿಗಳಿಗೆ ಬೀಗಹಾಕಬಹುದು ಹಾಗೂ ಅವುಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬಹುದು.

ವಿದೇಶಗಳ ವಿರುದ್ಧ ತನ್ನ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕವನ್ನೊಳಗೊಂಡ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಮೇಲೆ ಅಗಾಧ ಒತ್ತಡ ಹೇರುತ್ತಾ ಬಂದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News