ಗಡಿಯಾಚೆ ದಾಳಿ ನಡೆಸದಂತೆ ಭಾರತಕ್ಕೆ ಪಾಕ್ ಎಚ್ಚರಿಕೆ

Update: 2018-02-12 17:11 GMT

ಇಸ್ಲಾಮಾಬಾದ್, ಫೆ. 12: ಸುಂಜ್‌ವಾನ್ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ಕೈವಾಡವಿದೆ ಎಂಬ ಆರೋಪಗಳನ್ನು ಪಾಕಿಸ್ತಾನ ಸೋಮವಾರ ನಿರಾಕರಿಸಿದೆ ಹಾಗೂ ಕಾಶ್ಮೀರದ ವಿವಾದಾಸ್ಪದ ಭಾಗದ ಮೇಲೆ ಗಡಿ ಮೀರಿ ದಾಳಿ ನಡೆಸದಂತೆ ಭಾರತವನ್ನು ಎಚ್ಚರಿಸಿದೆ.

ಯಾವುದೇ ತನಿಖೆ ನಡೆಯುವ ಮೊದಲೇ ಭಾರತೀಯ ಮಾಧ್ಯಮ ಮತ್ತು ಅಧಿಕಾರಿಗಳು ‘ಬೇಜವಾಬ್ದಾರಿಯುತ’ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅದು ಹೇಳಿದೆ.

ಭಾರತವು ಪಾಕಿಸ್ತಾನದ ವಿರುದ್ಧ ಮಾನಹಾನಿ ಅಭಿಯಾನವನ್ನು ನಡೆಸುತ್ತಿದೆ ಹಾಗೂ ಉದ್ದೇಶಪೂರ್ವಕವಾಗಿ ಯುದ್ಧೋನ್ಮಾದವನ್ನು ಸೃಷ್ಟಿಸುತ್ತಿದೆ ಎಂದು ಪಾಕಿಸ್ತಾನದ ವಿದೇಶ ಕಚೇರಿ ವಕ್ತಾರರೊಬ್ಬರು ಆರೋಪಿಸಿದರು.

ಸೇನಾ ಶಿಬಿರದ ಮೇಲೆ ಶನಿವಾರ ನಡೆದ ದಾಳಿಗೆ ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಜೈಶೆ ಕಾರಣ ಎಂಬುದಾಗಿ ಭಾರತ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

ಭಯೋತ್ಪಾದಕರು ಸೇನಾ ಶಿಬಿರದಲ್ಲಿ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದಾರೆ ಹಾಗೂ ಸೈನಿಕರೊಬ್ಬರ ತಂದೆಯೂ ಪ್ರಾಣ ಕಳೆದುಕೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News