×
Ad

ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಸ್ತಾಂತರ

Update: 2018-02-12 22:44 IST

ಬೆಳ್ತಂಗಡಿ, ಫೆ. 12: ಸಂಘ ಸಂಸ್ಥೆಗಳು ಬಡವರಿಗೆ ನೆರವಾಗುವ ಕಾರ್ಯವನ್ನು ಮಾಡಿದಾಗ ದೇವರ ಆಶಿರ್ವಾದ ಇರುತ್ತದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿರುವ ಡಯಾಲಿಸಿಸ್ ಯಂತ್ರದ ಮೂಲಕ ಹಲವರು ಬಡ ರೋಗಿಗಳ ಜೀವ ಉಳಿಸುವ ಕಾರ್ಯವನ್ನು ಮಾಡುವಂತಾಗಲಿ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು.

 ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ದಕ್ಷಿಣ ಕನ್ನಡ ಮುಸ್ಲೀಂ ವೆಲ್ಫೇರ್ ಅಸೋಸಿಯೇಶನ್ ಖತಾರ್, ಅವರು ಹಿದಾಯ ಫೌಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ಸುಮಾರು ಏಳು ಲಕ್ಷ ವೆಚ್ಚದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ನೀಡಿರುವ ಡಯಾಲಿಸಿಸ್ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ತುರ್ತು ನಿಗಾ ಘಟಕ, ಹಾಗೂ ಆಧುನಿಕ ಎಕ್ಸ್‌ರೇ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು.

ಬೆಳ್ತಂಗಡಿ ಪ್ರದೇಶದಲ್ಲಿ ಸುಮಾರು 50 ಕ್ಕೂ ಹೆಚ್ಚು ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿದ್ದು ಸರಕಾರದಿಂದ ಒದಗಿಸಲಾಗಿರುವ ಎರಡು ಯಂತ್ರ ಗಳಿಂದ ಎಲ್ಲರಿಗೂ ಸೇವೆ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ ಆ ಕಾರಣದಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿತ್ತು ಇದೀಗ ಮೂರನೆಯ ಯಂತ್ರವೂ ಬಂದಿದೆ ಅದೂ ಕಡಿಮೆಯಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂಸ್ಥೆಯವರು ಇನ್ನೊಂದು ಡಯಾಲಿಸಿಸ್ ಯಂತ್ರವನ್ನು ಒದಗಿಸುವ ಮನಸ್ಸು ಮಾಡಬೇಕು ಎಂದು ವಿನಂತಿಸಿದರು. ಹಾಗೂ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಮಂಜೂರಾಗಿರುವ ರೂ 20 ಲಕ್ಷ ಅನುದಾನವನ್ನು ಅವರು ಹಸ್ತಾಂತರಿಸಿದರು. ಇದರಿಂದ ಅಗತ್ಯ ಕಾಮಗಾರಿ ಹಾಗೂ ಯಂತ್ರೋಪಕರಣಗಳ ಖರೀದಿ ನಡೆಸುವಂತೆ ಸೂಚಿಸಿದರು.

ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ, ಮಾತನಾಡಿ ವಿದೇಶದಲ್ಲಿ ದುಡಿಯುತ್ತಿರುವ ಕರಾವಳಿಯ ಜನರ ಸಹಕಾರದೊಂದಿಗೆ ಇಂತಹ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಅಗತ್ಯವಿರುವ ರಕ್ತ ಪರೀಕ್ಷಾ ಯಂತ್ರವನ್ನು ಒದಗಿಸುವುದಾಗಿ ಭರವಸೆ ನೀಡಿದರು, ಹಾಗೂ ಶಾಸಕರ ಬೇಡಿಕೆಯಂತೆ ಮತ್ತೊಂದು ಡಯಾಲಿಸಿಸ್ ಘಟಕವನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ರೋಗಗಳು ಬರುವ ಮೊದಲೇ ಅದರ ಬಗ್ಗೆ ತಿಳಿದುಕೊಂಡು ಅದು ಬರದಂತೆ ತಡೆಯುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರವನ್ನು ಸಂಸ್ಥೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ ಜಿಲ್ಲಾ ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಕೆ ಸಾಹುಲ್ ಹಮೀದ್ ಮಾತನಾಡಿ ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಅಭಿವೃದ್ದಿ ಪಡಿಸಲಾಗಿದ್ದು ಖಾಸಗಿ ಆಸ್ಪತ್ರೆಗಳಿಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವೇದಿಕೆಯಲ್ಲಿ ದ.ಕ ಮುಸ್ಲೀಂ ವೆಲ್ಫೇರ್ ಎಸೋಸಿಯೇಶನ್ ಖತಾರ್ ಇದರ ಮಾಜಿ ಅಧ್ಯಕ್ಷ ಬಿ ಮಹಮ್ಮದ್ ಕುಂಞಿ ಖತ್ತಾರ್, ಹಿದಾಯ ಫೌಂಡೇಶನ್‌ನ ಆಡಳಿತಾಧಿಕಾರಿ ಅಬೀದ್ ಅಸ್ಗರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ ಕಲಾಮಧು, ಬೆಳ್ತಂಗಡಿ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ. ಆದಂ, ಹಾಗೂ ಇತರರು ಉಪಸ್ಥಿತರಿದ್ದರು.

ಅಬ್ದುಲ್ ರಝಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಂಇಯ್ಯತುಲ್ ಫಲಾಹ್ ತಾಲೂಕು ಅಧ್ಯಕ್ಷ ಕಾಸೀಂ ಮಲ್ಲಿಗೆ ಮನೆ ವಂದಿಸಿದರು. ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿದಾಯ ಫೌಂಡೇಶನ್ ಹಾಗೂ ಜಂಇಯ್ಯತುಲ್ ಫಲಾಹ್, ದ.ಕ ಮುಸ್ಲೀಂ ವೆಲ್ಫೇರ್ ಎಸೋಸಿಯೇಶನ್ ಖತಾರ್ ಇದರ ಮುಖಂಡರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News