ಕರ್ನಾಟಕದಿಂದ 10 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಮೂಡುಬಿದಿರೆ, ಫೆ.12: ಎನ್‌ವೈಸಿಎಸ್ (ನ್ಯಾಶನಲ್ ಯುವ ಕೋ-ಅಪರೇಟಿವ್ ಸೊಸೈಟಿ) ಸಂಸ್ಥೆ, ಗೇಲ್ ಭಾರತೀಯ ಅನಿಲ ಪ್ರಾಧಿಕಾರ) ಸಹಕಾರದಿಂದ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಂಡ 2020 ಹಾಗೂ 2024 ರ ಒಲಿಂಪಿಕ್ಸ್ ವೇಗದ ಓಟಗಾರರ ಶೋಧ ಪ್ರಕ್ರಿಯೆಯ ರಾಜ್ಯಮಟ್ಟದ ಆಯ್ಕೆಯಲ್ಲಿ ಕರ್ನಾಟಕದಿಂದ 10 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.
ಸಂಪೂರ್ಣ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆಯಲ್ಲಿ 6 ಬಾಲಕಿಯರು ಹಾಗೂ 4 ಬಾಲಕರು ಮುಂದಿನ ಹಂತಕ್ಕೇರಿದರು. ದ.ಕ. ಜಿಲ್ಲೆಯ ಐವರು, ಬೆಂಗಳೂರಿನ ಇಬ್ಬರು, ಉಡುಪಿ, ಮೈಸೂರು ಹಾಗೂ ಬೆಳಗಾವಿಯ ತಲಾ ಒಬ್ಬರು ರಾಷ್ಟ್ರಮಟ್ಟಕ್ಕೇರಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರಿಗೆ ದೆಹಲಿಯ ತ್ಯಾಗರಾಜ ಮೈದಾನದಲ್ಲಿ ಫೆ.15 ರಿಂದ 21 ರ ತನಕ ತರಬೇತಿ ಹಾಗೂ 22 ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ.
ಫೆ.11ರಂದು ಸಂಜೆ ನಡೆದ ಸಮಾರೋಪದಲ್ಲಿ ಉದ್ಯಮಿ ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಸರ್ಕಾರಗಳು ನೀಡುವ ಸೌಕರ್ಯಗಳನ್ನು ವ್ಯರ್ಥ ಮಾಡದೆ ಹೆಚ್ಚೆಚ್ಚು ಉಪಯೋಗಿಸಿಕೊಂಡು ಉತ್ತಮ ಫಲಿತಾಂಶ ತರಲು ಯತ್ನಿಸಬೇಕು. ಒಲಿಂಪಿಕ್ಸ್‌ಗಾಗಿ ವೇಗದ ಓಟಗಾರರ ಶೋಧನೆಯಲ್ಲಿ ತೊಡಗಿರುವ ನ್ಯಾಶನಲ್ ಯುವ ಕೋ-ಅಪರೇಟಿವ್ ಸೊಸೈಟಿ ಹಾಗೂ ಗೇಲ್ ಸಂಸ್ಥೆ ಕೆಲಸ ಅಭಿನಂದನೀಯ ಎಂದು ಹೇಳಿದರು.
ಯುವ ಉದ್ಯಮಿ ಸೂರಜ್ ಜೈನ್, ಕ್ರೀಡಾಕೂಟ ರಾಜ್ಯ ಸಂಚಾಲಕ ರಮೇಶ್ ಕೆ., ಬೆಂಗಳೂರು ಸಂಚಾಲಕ ಸುರೇಶ್ ದೇವನಹಳ್ಳಿ, ಮೈಸೂರು ಸಹ ಸಂಚಾಲಕ ಭರತ್, ಕೊಪ್ಪಳ ಸಂಚಲಕ ಗವಿಸಿದ್ದಪ್ಪ, ಮಂಗಳೂರು ಸಹಸಂಚಾಲಕ ಹರ್ಷಿತ್, ರಾಜ್ಯ ತಾಂತ್ರಿಕ ಅಧಿಕಾರಿ ಅಶೋಕ್ ಶಿಂತ್ರೆ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರನ್ನು ಪುರಸ್ಕರಿಸಲಾಯಿತು.
ಆಯ್ಕೆಯಾದವರು
14 ವಯೋಮಿತಿಯ ಬಾಲಕಿಯರ ವಿಭಾಗ: ನೇಯೋಲು ಅಣ್ಣ (100ಮೀ, 200ಮೀ), ಸರೋನ ಸ್ತುತಿ (200ಮೀ), ಗೌತಮಿ ಶೆಟ್ಟಿ (400ಮೀ), ಸ್ವರಾಲಿ ದೇಸಾಯಿ (400ಮೀ), ಜಿ.ಮಂಜುಶ್ರೀ (400ಮೀ).
14 ವಯೋಮಿತಿ ಬಾಲಕರ ವಿಭಾಗ: ಎಂ.ಡಿ.ಮುನಾಫ್ (200ಮೀ).
17 ವಯೋಮಿತಿ ಬಾಲಕಿಯರ ವಿಭಾಗ: ಜೋಸ್ಸಾನ ಸಿಮೋಹ (100ಮೀ, 200ಮೀ)
17 ವಯೋಮಿತಿ ಬಾಲಕರ ವಿಭಾಗ: ರಿನ್ಸ್ ಜೋಸೆಫ್ (400ಮೀ), ಮಹಮ್ಮದ್ ಸಫ್ವಾನ್ (200ಮೀ), ಅಬಿನ್ ಬಿ.ದೇವಾಡಿಗ (200ಮೀ)