ಪ್ರಧಾನಿ ಮೋದಿ ಮೊದಲು ತಮ್ಮ ಪತ್ನಿಗೆ ನ್ಯಾಯ ಕೊಡಲಿ: ಶಾಹಿದಾ ತಸ್ಲೀಮಾ
ಬಂಟ್ವಾಳ, ಫೆ. 12: "ವೈಯಕ್ತಿಕ ಕಾನೂನಿನ ಮೇಲೆ ದಾಳಿಯನ್ನು ನಿಲ್ಲಿಸಿ" ಎಂಬ ಘೋಷಣೆಯಡಿ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸೋಮವಾರ ಕೈಕಂಬದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಎನ್‌ಡಬ್ಲ್ಯೂಎಂನ ಜಿಲ್ಲಾ ಕಾರ್ಯದರ್ಶಿ ಶಾಹಿದಾ ತಸ್ಲೀಮಾ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಈ ದೇಶದಲ್ಲಿ ಅದೆಷ್ಟೋ ಜ್ವಲಂತ ಸಮಸ್ಯೆ ಗಳಿಗೆ ಮುಸ್ಲಿಂ ಸಮುದಾಯ ಬಲಿಯಾಗುತ್ತಿದ್ದು, ಈ ಬಗ್ಗೆ ಮಾತನಾಡದ ಪ್ರಧಾನಮಂತ್ರಿ ಅವರು ತಲಾಖ್ ಎಂಬ ಹೆಸರಿನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಮೇಲೆ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಮುಸ್ಲಿಮರಿಗೆ ತಲಾಖ್ ಎಂಬುವುದು ದೊಡ್ಡ ಸಮಸ್ಯೆಯೇ ಅಲ್ಲ. ಆದರೆ ಕೇಂದ್ರ ಸರಕಾರ ತಲಾಖ್ ಅನ್ನು ಒಂದು ದೊಡ್ಡ ಸಮಸ್ಯೆ ಎಂದು ಬಿಂಬಿಸಿ ಇಸ್ಲಾಂ ಧರ್ಮದ ಮೇಲೆ ನೇರ ದಾಳಿ ಮಾಡುತ್ತಿದೆ ಎಂದು ಹೇಳಿದರು.
ಮುಸ್ಲಿಮ್ ಮಹಿಳೆಯರ ಮೇಲಿನ ವಿಶೇಷ ಕಾಳಜಿಯಿಂದ ಈ ಮಸೂದೆಯನ್ನು ಜಾರಿ ತರಲಾಗುತ್ತಿದೆ ಎಂದು ಹೇಳುತ್ತಿರುವ ಪ್ರಧಾನಿ ಮೋದಿ ಅವರು, ಮೊದಲು ತನ್ನ ಹೆಂಡತಿಗೆ ನ್ಯಾಯ ಕೊಡಲಿ. ತದನಂತರ ಝಕಿಯಾ ಜಾಫ್ರಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಲ್ಕೀಶ್ ಬಾನು, ನಕಲಿ ಎನ್‌ಕೌಂಟರ್‌ಗೆ ಬಲಿಯಾದ ಇಶ್ರತ್ ಜಹಾನ್ ಪ್ರಕರಣಕ್ಕೆ ನ್ಯಾಯಕೊಡಲಿ ಎಂದ ಅವರು, ತನ್ನ ಹೆಂಡತಿಗೆ ವಿಚ್ಛೇಧನ ನೀಡದವರು ದೇಶದ ಪ್ರಧಾನಿ ಯಾಗುತ್ತಾರೆ. ಆದರೆ ವಿಚ್ಛೇದನೆ ನೀಡಿದವರನ್ನು ಜೈಲಿಗೆ ಕಳುಹಿಸುವ ವಿಡಂಬಣೆಯ ಮಸೂದೆ ಈ ದೇಶದಲ್ಲಿ ಜಾರಿಗೆ ತರುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಜಾಫರ್ ಸ್ವಾದಿಕ್ ಫೈಝಿ ಮಾತನಾಡಿ, ಇಸ್ಲಾಂ ಧರ್ಮ ಸಂಪೂರ್ಣವಾಗಿದೆ. ಇದರ ಅನುಸಾರ ಪ್ರತಿಯೊಬ್ಬರು ನೈಜ ಮುಸಲ್ಮಾನನಾಗಿ ಬದುಕುತ್ತಿದ್ದಾರೆ. ಹುಟ್ಟಿನಿಂದ ಮರಣದವರೆಗೆ ಎಲ್ಲ ವಿಷಯವನ್ನು ಪವಿತ್ರ ಕುರ್‌ಆನ್‌ನಲ್ಲಿ ತಿಳಿಸ ಲಾಗಿದೆ. ಮುಸ್ಲಿಮರು ಎಂದೂ ಕುರ್‌ಆನ್ ಹಾಗೂ ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸುವವರಲ್ಲ. ಆದ್ದರಿಂದ ಈ ಮಸೂದೆಯನ್ನು ಮುಸ್ಲಿಮ್ ಸಮುದಾಯ ಎಂದಿಗೂ ಒಪ್ಪುವುದಿಲ್ಲ ಎಂದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾರ್ ಫರಂಗಿಪೇಟೆ ಮಾತನಾಡಿ, ತಲಾಖ್ ಮಸೂದೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತಲಾಖ್ ಪ್ರಕರಣಗಳಲ್ಲಿ ಮುಸ್ಲಿಮ್ ಪುರುಷರನ್ನು ಸಿಲುಕಿಸಿ ಜೈಲಿಗೆ ಕಳುಹಿಸುವ ದಮನದ ಹೊಸ ಅಸ್ತ್ರವಾಗಿದೆ. ಈ ಕರಾಳ ಮಸೂದೆಯ ಬಗ್ಗೆ ಎಸ್‌ಡಿಪಿಐ ಪಕ್ಷವು ರಾಷ್ಟ್ರ ವ್ಯಾಪಿ ಅಭಿಯಾನ ಮಾಡುವ ಮೂಲಕ ಜನರಿಗೆ ತಿಳಿಸುವ ಹಾಗೂ ಈ ಬಗ್ಗೆ ಪ್ರತಿಭಟಿಸುವ ಸಂಕಲ್ಪವನ್ನು ಹಮ್ಮಿಕೊಂಡಿದೆ ಎಂದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಹಿಂದು ಸಮುದಾಯದಲ್ಲಿ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದನ್ನು ಸರಿಪಡಿಸುವುನ್ನು ಬಿಟ್ಟು ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯ ಮೇಲೆ ಒತ್ತಾಯದ ಮಸೂದೆ ಜಾರಿಗೆ ತರುವ ಮೂಲಕ ಹಿಂದುತ್ವದ ಅಜೆಂಡಾವನ್ನು ಈ ದೇಶದಲ್ಲಿ ಬಲಪಡಿಸುತ್ತದೆ ಎಂದು ಆರೋಪಿಸಿದರು.
ಮುಸ್ಲಿಮ್ ಸಮಾನ ಸಂಘಟನೆಯ ಉಪಾಧ್ಯಕ್ಷ ಕೆ.ಎಚ್. ಅಬೂಬಕರ್ ಮಾತನಾಡಿ, ತಲಾಖ್ ಮಸೂದೆ ಬಗ್ಗೆ ಮಾತನಾಡದಂತೆ ಜಾತ್ಯತೀತ ಪಕ್ಷವೆಂದು ಹೇಳುತ್ತಿರುವ ಕಾಂಗ್ರೆಸ್,ಮುಸ್ಲಿಂ ಎಂಪಿಗಳಿಗೆ ನೊಟೀಸ್ ನೀಡಿದೆ. ಮುಸ್ಲಿಮ್ ಎಂಪಿಗಳು ಎಲ್ಲಿ ಹೋಗಿದ್ದಾರೆ? ಯಾಕೆ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಎಸ್‌ಡಿಟಿಯುನ ಯೂಸುಫ್ ಆಲಡ್ಕ, ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇಕ್ಬಾಲ್ ಗೂಡಿನಬಳಿ ಉಪಸ್ಥಿತರಿದ್ದರು. ಇಸ್ಮಾಯಿಲ್ ನಿರೂಪಿಸಿದರು.