ಕಾರ್ಕಳ: ನಾಗೇಶ್ ಆಚಾರ್ಯ ಕೊಲೆಯತ್ನ ಪ್ರಕರಣ; ರೌಡಿ ಶೀಟರ್ ಸಹಿತ ಮೂವರ ಬಂಧನ
ಕಾರ್ಕಳ, ಫೆ.13: ಕಾರ್ಕಳ ಎಸ್‌ವಿಟಿ ಶಾಲಾ ರಸ್ತೆಯ ಬಳಿ ಫೆ.10ರಂದು ಜ್ಯೋತಿ ಕಾಂಪ್ಲೆಕ್ಸ್‌ನ ಅಂಗಡಿಯಲ್ಲಿ ಚಿನ್ನಬೆಳ್ಳಿ ಆಭರಣ ಕೆಲಸ ಮಾಡುತ್ತಿದ್ದ ನಾಗೇಶ್ ಆಚಾರ್ಯ ಎಂಬವರನ್ನು ಚೂರಿಯಿಂದ ತಿವಿದು ಕೊಲೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಉಡುಪಿ ಡಿಸಿಐಬಿ ಪೊಲೀಸರು ಫೆ.13ರಂದು ಬಂಧಿಸಿದ್ದಾರೆ.
ಮಂಗಳೂರು ಶಕ್ತಿನಗರದ ಸಚಿನ್ ಪೂಜಾರಿ (26), ಕೊಡಿಯಾಲ್‌ಬೈಲ್ ಕಲಾಕುಂಜ ರಸ್ತೆಯ ಶಿಶಿರ ಸುವರ್ಣ (24), ಮಂಗಳೂರು ಕಾರ್‌ಸ್ಟ್ರೀಟ್‌ನ ಹೂವಿನ ಮಾರ್ಕೆಟ್ ಬಳಿಯ ಪ್ರೀತಮ್ (19) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಅವರನ್ನು ಮಂಗಳೂರಿನ ನಂತೂರು ಮತ್ತು ಕುಳಾಯಿ ಹೊನ್ನಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಮುಂದಿನ ಕ್ರಮಕ್ಕಾಗಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಶಿಶಿರ ಸುವರ್ಣ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣದ ಆರೋಪಿಯಾಗಿದ್ದು, ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ನ್ಯಾಯಾಲಯದ ದಸ್ತಗಿರಿ ವಾರೆಂಟ್ ಕೂಡಾ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರಗಿ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವನೆ ಮಾರ್ಗ ದರ್ಶನದಲ್ಲಿ ಉಡುಪಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಡಿಸಿಐಬಿ ಎಎಸ್ಸೈ ರವಿಚಂದ್ರ ಹಾಗೂ ಸಿಬ್ಬಂದಿಗಳಾದ ಸಂತೋಷ ಕುಂದರ್, ಸುರೇಶ, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ರಾಘವೇಂದ್ರ ಉಪ್ಪುಂದ, ಪ್ರವೀಣ, ರಾಜ್ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.