×
Ad

ಶಾಸಕ ಲೋಬೊ, ಮೊಯ್ದಿನ್ ಬಾವ ಹಗರಣದಲ್ಲಿ ಭಾಗಿಯಾಗಿರುವ ಸಾಧ್ಯತೆ: ಮುನೀರ್ ಕಾಟಿಪಳ್ಳ

Update: 2018-02-13 19:45 IST

ಮಂಗಳೂರು, ಫೆ.13: ಮಂಗಳೂರಿನಲ್ಲಿ ಕೆಯುಐಡಿಎಫ್‌ಸಿ ಕೈಗೆತ್ತಿಕೊಂಡಿರುವ ‘ಸೀವೇಜ್ ಪಂಪಿಂಗ್‌ಮೇನ್ ದುರಸ್ತಿ ಮತ್ತು ಬದಲಾವಣೆ ಯೋಜನೆ’ ಹಾಗೂ ಗುತ್ತಿಗೆ ನೀಡುವಿಕೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

ಈ ಮಧ್ಯೆ ಮಂಗಳವಾರ ಸಂಜೆ ಮುನೀರ್ ಕಾಟಿಪಳ್ಳ ಅವರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಹಗರಣಗಳ ಬಗ್ಗೆ ಲೈವ್‌ನಲ್ಲಿ ನೇರ ಆರೋಪ ಮಾಡಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಒಳಚರಂಡಿ ವ್ಯವಸ್ಥೆಗಳು ಹಳೆಯದಾಗಿವೆ. ಏರಿಕೆಯಾಗಿರುವ ಜನಸಂಖ್ಯೆ, ಒಳಚರಂಡಿಯ ಧಾರಣಾಸಾಮರ್ಥ್ಯವನ್ನು ಪರಿಗಣಿಸಿ, ಹಳೆಯ ಒಳಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸುವ, ಮೇಲ್ಮಟ್ಟಕ್ಕೆ ಏರಿಸುವ ಯೋಜನೆಯನ್ನು ‘ಕೆಯುಐಡಿಎಫ್‌ಸಿ’ ಕೈಗೆತ್ತಿಕೊಂಡಿವೆ. ಆ ಯೋಜನೆಯ ಪ್ರಕಾರ ಮಂಗಳೂರಿನಲ್ಲಿ ಎಪ್ಪತ್ತರ ದಶಕದಲ್ಲಿ ಅಳವಡಿಸಿರುವ ಈಗ ಹಳೆಯದಾಗಿರುವ ಮತ್ತು ಹದಗೆಟ್ಟಿರುವ ಸೀವೇಜ್ ಪಂಪಿಂಗ್‌ಮೇನ್’ ಅನ್ನು ದುರಸ್ತಿಗೊಳಿಸುವುದು, ಬದಲಾಯಿಸುವುದು ಪ್ರಮುಖವಾಗಿ ಆಗಬೇಕಾದ ಕಾರ್ಯವಾಗಿದೆ.
ಈ ಸೀವೇಜ್ ಪಂಪಿಂಗ್‌ಮೇನ್ ದುರಸ್ತಿ ಮತ್ತು ಬದಲಾವಣೆಗೆ ಇತ್ತೀಚೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಇದರಲ್ಲಿ ಭಾಗವಹಿಸಿರುವ ಹೈದರಾಬಾದ್ ಮೂಲದ ಡಿಆರ್‌ಎಸ್ ಹಾಗೂ ಬಳ್ಳಾರಿ ಮೂಲದ ಅಕಿಲ್ ಎಂಬ ಕಂಪನಿಗಳು ಹೊಂದಾಣಿಕೆಯಡಿ ಗುತ್ತಿಗೆ ಪಡೆದುಕೊಂಡಿವೆ. ಗುತ್ತಿಗೆ ನೀಡುವಿಕೆಯ ಸಂದರ್ಭ ನಡೆದಿರುವ ಪ್ರಕ್ರಿಯೆಗಳು ಈ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆಗಳು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಈ ಯೋಜನೆಗೆ ಆರಂಭದಲ್ಲಿ 60 ಕೋ.ರೂ. ವೆಚ್ಚವನ್ನು ಕೆಯುಐಡಿಎಫ್‌ಸಿ ನಿಗದಿಮಾಡಿತ್ತು. ಆ ನಂತರ ಪಂಪಿಂಗ್ ಮೇನ್ ಬದಲಾಯಿಸುವಾಗ ಮ್ಯಾನ್ ಹೋಲ್‌ಗಳ ದುರಸ್ತಿಗಾಗಿ 8 ಕೋ.ರೂ., ರಸ್ತೆ ದುರಸ್ತಿಗಾಗಿ 5 ಕೋ.ರೂ. ಮತ್ತು ಇತರ ವೆಚ್ಚ ಹಾಗೂ ಜಿಎಸ್‌ಟಿ ಹೀಗೆ ವಿವಿಧ ಹೆಸರಿನಲ್ಲಿ ಟೆಂಡರ್ ಸಂದರ್ಭ ಮೊತ್ತವನ್ನು 94 ಕೋ.ರೂ.ಗೆ ಹೆಚ್ಚಿಸಲಾಯಿತು. ಇದು ಆರಂಭದಲ್ಲಿ ನಿಗದಿ ಮಾಡಿದ ಮೊತ್ತ ಕ್ಕಿಂತಲೂ ಶೇ. ಅರವತ್ತರಷ್ಟು ಹೆಚ್ಚು. ಈ ಪ್ರಮಾಣದ ಏರಿಕೆ ಹಾಗೂ ಗುತ್ತಿಗೆಯಲ್ಲಿ ಭಾಗವಹಿಸಿದ ಎರಡು ಕಂಪನಿಗಳು ಕೊನೆಗೆ ಜೊತೆಯಾಗಿ ಗುತ್ತಿಗೆ ಪಡೆದು ಕೊಂಡಿರುವುದನ್ನು, ಎಂಪವರ್ ಕಮಿಟಿ ಯಾವುದೇ ತಕರಾರುಗಳಿಲ್ಲದೆ ಈ ಪ್ರಕ್ರಿಯೆಗಳಿಗೆ ಅಂಗೀಕಾರ ನೀಡಿರುವುನ್ನು ನೋಡಿದರೆ ಇದರಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟ ಎಂದು ಮುನೀರ್ ಕಾಟಿಪಳ್ಳ ಫೇಸ್‌ಬುಕ್ ಲೈವ್‌ನಲ್ಲಿ ಆರೋಪ ಮಾಡಿದ್ದಾರೆ.

ಮಂಗಳೂರಿನ ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಹೆಸರಿನಲ್ಲಿ, ಜನತೆಯ ತೆರಿಗೆಯ ದುಡ್ಡನ್ನು ದುರ್ಬಳಕೆ ಮಾಡುವ, ದೋಚುವ ಪ್ರಯತ್ನವಾಗಿದೆ. ಕೆಯುಐಡಿಎಫ್‌ಸಿ ಮಂಗಳೂರು ಮತ್ತು ಬೆಂಗಳೂರು ಕಚೇರಿಯ ಅಧಿಕಾರಿಗಳು ಶಾಮೀಲಾಗದೆ ಈ ರೀತಿ ಅವೈಜ್ಞಾನಿಕವಾಗಿ ಏರಿಕೆಯಾದ ಯೋಜನಾ ವೆಚ್ಚಕ್ಕೆ ಅನುಮೋದನೆ ಪಡೆಯುವುದು ಅಸಾಧ್ಯ. ಕೆಯುಐಡಿಎಫ್‌ಸಿ ಎಂಪವರ್ ಕಮಿಟಿ ಯಾವುದೇ ತಕರಾರುಗಳಿಲ್ಲದೆ ಈ ಏರಿಕೆ ಯೋಜನೆ, ಟೆಂಟರ್‌ಗೆ ಅನುಮೋದನೆ ನೀಡಿರುವುದು ಇದಕ್ಕೊಂದು ಉದಾಹರಣೆ.

ಅದಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಈ ರೀತಿಯ ಭ್ರಷ್ಟಗೊಂಡಿರುವ ಯೋಜನೆಗೆ ಬೆಂಬಲವಾಗಿ ನಿಂತಿರುವುದು, ಜನಪ್ರತಿನಿಧಿಗಳು ಇದರಲ್ಲಿ ಶಾಮೀಲಾಗಿರುವ ಸಾಧ್ಯತೆಗಳಿವೆ. ಶಾಸಕ ಜೆ.ಆರ್. ಲೋಬೊ ಮಂಗಳೂರು ಮಹಾನಗರ ಪಾಲಿಕೆಗೆ ಈ ಹಿಂದೆ ಕಮೀಷನರ್ ಆಗಿದ್ದವರು. ಸಹಜವಾಗಿ ಇಂತಹ ಯೋಜನೆಗಳ ಕುರಿತು ಅವರಿಗೆ ಅಮೂಲಾಗ್ರ ಮಾಹಿತಿಗಳಿರುತ್ತವೆ. ಆದರೂ ಅವರು 94 ಕೋಟಿ ರೂಪಾಯಿಗೆ ಏರಿಕೆಯಾಗಿರುವ, ಸಾರ್ವಜನಿಕರ ದುಡ್ಡನ್ನು ದುರ್ಬಳಕೆ ಮಾಡುವ ಯೋಜನೆಗೆ ಬೆಂಬಲವಾಗಿ ನಿಂತಿರುವುದು ಮತ್ತು ಶಾಸಕ ಮೊಯ್ದಿನ್ ಬಾವ ವಿಷಯದ ಅರಿವಿದ್ದರೂ ಮೌನ ವಹಿಸಿರುವುದು ಇವರು ಅವ್ಯವಹಾರದಲ್ಲಿ ಭಾಗಿಯಾಗಿರುವ ಸಾಧ್ಯತೆಗಳನ್ನು ತೋರುತ್ತದೆ ಎಂದು ದೂರಿದ್ದಾರೆ.

ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಈ ಯೋಜನೆಯನ್ನು ದುರುಪಯೋಗಪಡಿಸಿ ಸರಕಾರದ ನಿಧಿಯನ್ನು ತಿಂದುಹಾಕುವ ಅವ್ಯವಹಾರವನ್ನು ಒಪ್ಪಿಕೊಳ್ಳಲಾಗದು. 360 ಕೋ.ರೂ. ಎಡಿಬಿ ಸಾಲದಿಂದ ಈ ಹಿಂದೆ ಕುಡ್ಸೆಂಪ್ ಯೋಜನೆಯ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ಅಂದು 360 ಕೋ.ರೂ. ಬಳಸಿ ರೂಪಿಸಿದ ಒಳಚರಂಡಿ ವ್ಯವಸ್ಥೆ ಕಳಪೆ ಕಾಮಗಾರಿಯಿಂದ ಈವರೆಗೂ ನಾಗರಿಕರ ಬಳಕೆಗೆ ಸಿಕ್ಕಿಲ್ಲ. ಆ ಕುರಿತು ಡಿವೈಎಫ್‌ಐ ನೀಡಿದ ದೂರನ್ನು ನಗರಾಭಿವೃದ್ದಿ ಸಚಿವರು ಅಂಗೀಕರಿಸಿ, ಸಿಐಡಿ ತನಿಖೆಯ ಘೋಷಣೆ ಮಾಡಿದ್ದರೂ ಈವರಗೆ ತನಿಖೆಗೆ ಆದೇಶ ನೀಡದೆ ಕುಡ್ಸೆಂಪ್ ಭ್ರಷ್ಟರನ್ನು ರಕ್ಷಿಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಈಗ ಮತ್ತೊಂದು ಸುತ್ತಿನ ಭ್ರಷ್ಟಾಚಾರಕ್ಕೆ ಪಂಪಿಂಗ್ ಮೇನ್ ಬದಲಾವಣೆಯ ಯೋಜನೆಯ ಮೂಲಕ ಅನುವು ಮಾಡಿಕೊಡಲಾಗುತ್ತಿದೆ. ಎಡಿಬಿ ಎರಡನೇ ಹಂತದ ಹಣಕಾಸಿನ ಯೋಜನೆಯಡಿ ರೂಪಿಸಲಾಗುವ ಒಳಚರಂಡಿ, ಕುಡಿಯುವ ನೀರಿನ ಯೋಜನೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ, ಮಾಹಿತಿ ನೀಡುವಿಕೆಗಾಗಿ ಕೆಯುಐಡಿಎಫ್‌ಸಿ ಫೆ.15ರಂದು ಸಾರ್ವಜನಿಕ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಂಘಟನೆಯು ಪ್ರಶ್ನೆಗಳನ್ನು ಎತ್ತಲಿದೆ. 

ಹಾಗಾಗಿ ಮುಖ್ಯಮಂತ್ರಿ ಈ ಕುರಿತು ಮಧ್ಯ ಪ್ರವೇಶಿಸಬೇಕು, ದೂರನ್ನು ಪರಿಗಣಿಸಿ ಈಗ ಅಂಗೀಕಾರಗೊಂಡಿರುವ ಟೆಂಡರ್, ಯೋಜನೆಗೆ ತಡೆ ನೀಡಬೇಕು. ನಡೆದಿರುವ ಅವ್ಯವಹರವನ್ನು ಪತ್ತೆ ಹಚ್ಚಲು ಉನ್ನತ ತನಿಖೆಗೆ ಆದೇಶಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಕ್ರಮವಹಿಸಲು ಒತ್ತಾಯಿಸಿದ್ದಾರೆ.

ಸ್ಪಂದಿಸದೇ ಇದ್ದರೆ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News