×
Ad

ಕಾಳಾವರ: ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

Update: 2018-02-13 21:53 IST

ಕುಂದಾಪುರ, ಫೆ.13: ವಿಜಯನಗರ ಸಾಮ್ರಾಜ್ಯದ ಅರಸ ಎರಡನೇ ದೇವರಾಯನ ಶಿಲಾ ಶಾಸನವೊಂದು ಕುಂದಾಪುರ ತಾಲೂಕಿನ ಕಾಳಾವರದಲ್ಲಿ ಫೆ. 12ರಂದು ಪತ್ತೆಯಾಗಿದೆ.

ಶಿರ್ವ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಮುರುಗೇಶಿ, ಪುರಾತತ್ವ ವಿದ್ಯಾರ್ಥಿಗಳಾದ ಕೀರ್ತಿ, ಸಹನಾ, ರಶ್ಮಿತಾ, ಹಳೆ ವಿದ್ಯಾರ್ಥಿ ಸುಭಾಷ್, ಕೊಲ್ಲೂರು ಮುರುಳೀಧರ ಹೆಗಡೆ ಹಾಗೂ ಕಲ್ಯಾಣಪುರದ ಶ್ರೀಧರ್ ಭಟ್ ಕಾಳಾವರದ ಶ್ರೀ ಮಹಾ ಲಿಂಗೇಶ್ವರ ಹಾಗೂ ಕಾಳಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ.

ಶಾಸನ 1.37ಮೀ. ಎತ್ತರ ಮತ್ತು 0.61 ಮೀ. ಅಗಲವಿದೆ. ಶಾಸನದ ಮೇಲ್ಭಾಗದ ಲಾಳಾ ಕೃತಿಯ ಪಟ್ಟಿಕೆಯಲ್ಲಿ ಸೂರ್ಯ, ಚಂದ್ರ, ಮಧ್ಯದಲ್ಲಿ ಶಿವಲಿಂಗವಿದೆ. ಶಿವಲಿಂಗದ ಸುತ್ತ ಲಿಂಗಾಕೃತಿಯಲ್ಲಿ ಪ್ರಭಾವಳಿಯಿದೆ. ಶಿವ ಲಿಂಗದ ಬಲಭಾಗದಲ್ಲಿ ಪಾಣಿಪೀಠದ ಗೋಮುಖವಿದೆ. ಅದರ ಎದುರಿನಲ್ಲಿ ಕುಳಿತ ಭಂಗಿಯಲ್ಲಿರುವ ಗೋವು ಇದೆ. ಲಿಂಗದ ಎಡಭಾಗದಲ್ಲಿ ದೀಪದ ಕಂಭವಿದೆ. ಪಕ್ಕದಲ್ಲಿ ರಾಜ ಲಾಂಛನ ಸೂಚಕವಾದ ಕಠಾರಿ ಇದೆ.

ಶಾಸನ ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಬರೆಯಲಾಗಿದ್ದು, ಒಟ್ಟು 38 ಸಾಲುಗಳಲ್ಲಿ ಬರೆಯಲ್ಪಟ್ಟಿರುವ ಈ ಶಾಸನ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ರಾಜಮನೆತನದ ಚಕ್ರವರ್ತಿ ಎರಡನೆ ದೇವರಾಯನ ಆಳ್ವಿಕೆಗೆ ಸೇರಿದ್ದಾಗಿದೆ. ಶಾಸನ, ಗಣಪತಿ, ಸರಸ್ವತಿ ಹಾಗೂ ಶಿವಸುತ್ತಿಯೊಂದಿಗೆ ಪ್ರಾರಂಭವಾಗುತ್ತದೆ.

ಶಾಸನದಲ್ಲಿ ತಿರುಮಲೆ, ಸಲಾಡಿ(ಈಗಿನ ಸಲ್ವಾಡಿ), ಕಂದಾಉರ(ಈಗಿನ ಕಂದಾವರ), ಎಡಹಾಡಿ ಎಂಬ ಸ್ಥಳಗಳನ್ನು ಉಲ್ಲೇಖಿಸಲಾಗಿದೆ. ಶಾಸನವನ್ನು ಅಂಣಪ್ಪಸೇನಬೋವ ಎಂಬಾತ ಬರೆದ ಬರಹ ಎಂದು ಶಾಸನದ ಕೊನೆಯಲ್ಲಿ ಹೇಳಲಾಗಿದೆ. ಶಕ ವರುಷ 1360ನೆಯ ವರ್ತಮಾನ ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಶುದ್ಧ 5 ಲು ಎಂದು ಕಾಲವನ್ನು ಉಲ್ಲೇಖಿಸಲಾಗಿದೆ. ಇದು ಕ್ರಿ.ಶ. 23.10.1438ರ ಗುರುವಾರಕ್ಕೆ ಸರಿಹೊಂದುತ್ತದೆ ಎಂದು ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಎರಡನೆ ದೇವರಾಯನನ್ನು ಅರಿರಾಯ ವಿಭಾಡ, ಗಜಬೇಟೆಕಾರನೆಂಬ ಬಿರುದುಗಳೊಂದಿಗೆ ಶಾಸನ ಪರಿಚಯಿಸುತ್ತದೆ. ಆತನ ಆಳ್ವಿಕೆಯ ಕಾಲದಲ್ಲಿ ಚಂಡರಸ ಒಡೆಯರು ಬಾರಕೂರು ರಾಜ್ಯದ ರಾಜ್ಯಪಾಲರಾಗಿ ಆಳ್ವಿಕೆ ನಡೆಸು ತ್ತಿದ್ದರೆಂದು ಶಾಸನದಿಂದ ತಿಳಿಯುತ್ತದೆ. ಶಾಸನದಲ್ಲಿ ತಿರುಮಲೆ ಭಂಡಾರಿ ನಾಯಕ ಮತ್ತು ಕಾಳಾವರದ ದುಗ್ಗಣ ನಾಯಕ ಎಂಬ ಇಬ್ಬರು ಅಧಿಕಾರಿ ಗಳನ್ನು ಹೆಸರಿಸಲಾಗಿದೆ.

ದುಗ್ಗಣ್ಣ ನಾಯಕ ಎಂಬ ಸ್ಥಳೀಯ ಅಧಿಕಾರಿ, ತಿರುಮಲೆಯ ಭಂಡಾರಿ ನಾಯಕರ ಮೂಲಕ ಚಕ್ರವರ್ತಿಯ ಬಳಿಗೆ ತೆರಳಿ ಮಾಡಿಕೊಂಡ ಬಿನ್ನಹದ ಮೇರೆಗೆ, ಕಾಳಉರ ಎಂಬ ಪ್ರದೇಶವನ್ನು ದುಗ್ಗಣ ನಾಯಕನಿಗೆ ಸರ್ವ ಮಾನ್ಯವಾಗಿ ನೀಡಿದ ವಿಷಯವನ್ನು ಈ ಶಾಸನದಲ್ಲಿ ತಿಳಿಸಲಾಗಿದೆ. ಈ ದುಗ್ಗಣ ನಾಯಕ ಬಹುಶಃ ಬಸ್ರೂರಿನ ಕೋಟೆಯ ಅಧಿಕಾರಿಯಾಗಿದ್ದರ ಬಹುದು ಎಂದು ಇತಿಹಾಸತಜ್ಞರು ಅಂದಾಜಿಸಿದ್ದಾರೆ.

ಶಾಸನಾಧ್ಯಯನಕ್ಕೆ ದೇವಾಲಯ ಅರ್ಚಕ ಸತ್ಯನಾರಾಯಣ ಪುರಾಣಿಕ್ ಕೆ., ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್ ಎನ್.ಶೆಟ್ಟಿ., ಸದಸ್ಯರಾದ ನಾಗರಾಜ ರಾವ್ ಕೆ., ಸಿಬ್ಬಂದಿ ವರ್ಗದ ಮಂಜುನಾಥ್ ಆಚಾರ್., ಹುಬ್ಬಳ್ಳಿ ಡಾ. ನಾಗರಾಜ ಪುರಾಣಿಕ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News