ಉಡುಪಿ: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಉದ್ಘಾಟನೆ
ಉಡುಪಿ, ಫೆ.13: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರವನ್ನು ಉಡುಪಿ- ಚಿಕ್ಕ ಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಉಡುಪಿ-ಮಣಿಪಾಲ ರಸ್ತೆಯ ರಿಯಲೆನ್ಸ್ ಟ್ರೆಂಡ್ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿ ಉದ್ಯೋಗ ಮಾರುಕಟ್ಟೆಯ ಇಂದಿನ ಅಗತ್ಯತೆಯಾದ ಕೌಶಲ್ಯ ತರಬೇತಿಯನ್ನು ನೀಡಲು ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿದ್ದಾರೆ ಎಂದರು.
ಈ ಕೇಂದ್ರದ ಮೂಲಕ ಯುವಜನತೆಗೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ಕೌಶಲ್ಯ ಗಳನ್ನು ಕಲಿಸಲಾಗುವುದಲ್ಲದೇ, ಉದ್ಯೋಗವನ್ನು ದೊರಕಿಸಿಕೊಡಲಾಗು ವುದು, ಕಳೆದ 70 ವರ್ಷಗಳಲ್ಲಿ ಇಂಥ ಯೋಜನೆಯನ್ನು ಯಾರೂ ಸಹ ಅನುಷ್ಠಾನ ಗೊಳಿಸಿಲ್ಲ.ಮೋದಿ ಅವರು ಕೌಶಲ್ಯಾಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯವನೇ ಪ್ರಾರಂಭಿಸಿದ್ದಾರೆ ಎಂದು ಶೋಭಾ ಹೇಳಿದರು.
ದೇಶದಲ್ಲಿ ಐಟಿ ಇಂದು ಆಕರ್ಷಣೆ ಕಳೆದುಕೊಂಡಿದೆ. ಇಂಜಿನಿಯರಿಂಗ್ ಪದವೀಧರರಲ್ಲೂ ಭಾರೀ ಸಂಖ್ಯೆಯ ನಿರುದ್ಯೋಗಿಗಳಿದ್ದಾರೆ. ಹೀಗಾಗಿ ಪಠ್ಯ ದೊಂದಿಗೆ ಕೌಶಲ್ಯ ತರಬೇತಿ ನೀಡಲು ಇಲ್ಲಿ ಅವಕಾಶವಿದ್ದು, ಕೇಂದ್ರದ ಮೂಲಕ ತರಬೇತಾದವರಿಗೆ ಕೆಲಸವನ್ನೂ ದೊರಕಿಸಿಕೊಡುವ ಹೊಣೆಯನ್ನೂ ವಹಿಸಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬೆಂಗಳೂರಿನ ರೂಮನ್ ಟೆಕ್ನಾಲಜಿಯ ಆಡಳಿತ ನಿರ್ದೇಶಕ ಕೆ.ಮನೀಷ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರೆ, ಜೊಯೆಲ್ ಅಲ್ಮೇಡಾ ಕಾರ್ಯಕ್ರಮ ನಿರ್ವಹಿಸಿ, ಕೇಂದ್ರ ಮುಖ್ಯಸ್ಥ ರಾಘವೇಂದ್ರ ವಂದಿಸಿದರು.
ಪಕೋಡ ಮಾರಾಟಗಾರರ ಅಣಕ
ಪಕೋಡ ಮಾರಾಟದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯನ್ನು ಟೀಕಿಸುವ, ಖಂಡಿಸುವ ಭರದಲ್ಲಿ ಕಾಂಗ್ರೆಸಿಗರು ಪಕೋಡ ಮಾರಾಟ ಮಾಡುವವರನ್ನು ಅಣಕಿಸಿ, ತಮಾಷೆ ಮಾಡುತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಕರಾವಳಿ ಭಾಗದ ಸಾವಿರಾರು ಯುವಕರು ಬೇರೆ ಬೇರೆ ಕಡೆ ಹೋಗಿ ಪಕೋಡ ಹಾಗೂ ಇತರ ವಸ್ತುಗಳನ್ನು ಮಾಡಿ ಜೀವನ ಸಾಗಿಸುತಿದ್ದಾರೆ. ಇವರಲ್ಲಿ ಸಾಕಷ್ಟು ಮಂದಿ ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಂಡಿದ್ದಾರೆ. ಕಾಂಗ್ರೆಸಿಗರು ಮೋದಿ ಅವರನ್ನು ಟೀಕಿಸುವ ಭರದಲ್ಲ ಇವರನ್ನು ಅಣಕಿಸುತಿದ್ದಾರೆ ಎಂದರು.
ಉಚಿತ ತರಬೇತಿ
ಉಡುಪಿಯ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಎಂಟು ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಯಾವುದೇ ವಿದ್ಯಾಭ್ಯಾಸ ಇಲ್ಲದವರಿಂದ ಹಿಡಿದು ಇಂಜಿನಿಯರಿಂಗ್ ಪದವೀಧರರವರೆಗೆ ಇಲ್ಲಿ ತರಬೇತಿ ಪಡೆಯಲು ಅವಕಾಶಗಳಿವೆ. ಯುವತಿಯರಿಗೆ ಮತ್ತು ಮಹಿಳೆಯರಿಗೆ ಬ್ಯೂಟಿ ಮತ್ತು ವೆಲ್‌ನೆಸ್ ಹಾಗೂ ಆಪೇರಲ್ಸ್ ತರಬೇತಿ ನೀಡಲಾಗುತ್ತದೆ.
ಕೇಂದ್ರದಲ್ಲಿ ಎಂಟು ಕ್ಲಾಸ್‌ರೂಮ್ ಹಾಗೂ ಎಂಟು ಪ್ರಾಕ್ಟಿಕಲ್ ರೂಮ್‌ಗಳಿವೆ. 16 ಮಂದಿ ತರಬೇತುದಾರರು ಹಾಗೂ ನಾಲ್ವರು ಕೌನ್ಸಿಲರ್‌ಗಳಿದ್ದಾರೆ. ಇಲ್ಲಿ ಎಲ್ಲಾ ತರಬೇತಿಗಳು ಮೂರು ತಿಂಗಳ ಅವಧಿಯದ್ದಾಗಿದೆ ಎಂದು ಸೆಂಟರ್‌ಹೆಡ್ ರಾಘವೇಂದ್ರ ತಿಳಿಸಿದರು.