ಫೆ.16ರಿಂದ ಡಿಜಿಟಲ್ ಆರ್ಥಿಕತೆ ಕುರಿತು ನಿಟ್ಟೆಯಲ್ಲಿ ಸಮಾವೇಶ
ನಿಟ್ಟೆ, ಫೆ.13: ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ‘ಡಿಜಿಟಲ್ ಆರ್ಥಿಕತೆಯ ಅವಕಾಶಗಳು ಹಾಗೂ ಸವಾಲುಗಳು’ ವಿಷಯದ ಕುರಿತು ಎರಡು ದಿನಗಳ ನಿಟ್ಟೆ ಸಿಇಓ ಸಮಾವೇಶ ಫೆ.16 ಮತ್ತು 17ರಂದು ನಿಟ್ಟೆಯಲ್ಲಿ ನಡೆಯಲಿದೆ.
ಸುಮಾರು 300 ಮಂದಿ ವಿದ್ಯಾರ್ಥಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ 100ಕ್ಕೂ ಅಧಿಕ ಮಂದಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಾಣಿಜ್ಯ ವ್ಯವಹಾರಗಳಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅಗತ್ಯತೆ ಹಾಗೂ ಅದರ ಮೂಲಕ ಶೀಘ್ರ ಅಭಿವೃದ್ಧಿಯ ಮಾರ್ಗಗಳ ಕುರಿತು ಇಲ್ಲಿ ವಿವಿಧ ಕೋನಗಳಿಂದ ವಿಶ್ಲೇಷಣೆ, ಮಾಹಿತಿಗಳ ವಿನಿಮಯ ನಡೆಯಲಿದೆ.
ಸಮಾವೇಶದಲ್ಲಿ ಡಿಎಕ್ಸ್‌ಸಿ ಟೆಕಾಲಜಿಯ ಎಂಡಿ ಶ್ರೀಕಾಂತ್ ಕೆ.ಎ., ಆ್ಯಕ್ಸಿಸ್ ಕ್ಯಾಪಿಟಲ್ ಲಿ.ನ ಡೆಪ್ಯುಟಿ ಸಿಇಒ ಅರ್ನಿಬನ್ ಚಕ್ರವರ್ತಿ, ಎಂಡಿಜಿ ಗ್ರೂಪ್‌ನ ಕೆ.ಮಂಜು, ಪೈಸಾಬಜಾರ್.ಕಾಮ್‌ನ ಸಿಇಒ ನವ್ಿ ಕುರ್ಕಿಜಾ, ಕ್ಲಿಯರ್‌ಟ್ರಿಪ್ ಡಾಟ್‌ಕಾಮ್‌ನ ಸಂಯುಕ್ತ ಶ್ರೀಧರನ್, ರಾಯಲ್ ಬ್ಯಾಂಕ್ ಆಪ್ ಸ್ಕಾಟ್ಲಂಡ್‌ನ ಸಿಒಒ ಸಂದೀಪ್ ಶರ್ಮ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ. ಕೆ.ಶಂಕರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.