×
Ad

ಕಾಂಗ್ರೆಸ್ಸಿಗರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಬಂಧವಿದೆಯಾ ?

Update: 2018-02-13 22:07 IST

ಉಡುಪಿ, ಫೆ.13: ಹಾರ್ಡ್ ಹಿಂದುತ್ವ, ಸಾಫ್ಟ್ ಹಿಂದುತ್ವ ಎಂದರೆ ಏನು ? ಕೊಲೆ ಮಾಡಿ, ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಹಾರ್ಡ್ ಹಿಂದುತ್ವನಾ ? ಕಾಂಗ್ರೆಸ್ಸಿಗರು ಹಿಂದೂಗಳಲ್ವಾ ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗ ಬಾರದಾ ? ಕಾಂಗ್ರೆಸ್ಸಿಗರು ದೇವಸ್ಥಾನಕ್ಕೆ ಹೋಗದಂತೆ ಸಂವಿಧಾನ ನಿರ್ಬಂಧ ವಿಧಿಸಿದೆಯಾ ? ದೇವರ ದರ್ಶನ ಮಾಡಲು ನಮಗೆ ಬಿಜೆಪಿಗರ ಪರ್ಮಿಶನ್ ಬೇಕಾ ?....

ಇವು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರ ಬಾಯಿಯಿಂದ ಪುಂಖಾನುಪುಂಖವಾಗಿ ಹೊರಬಂದ ಗಟ್ಟಿ ಸ್ವರದ ಪ್ರಶ್ನೆಗಳು. ಕಡಿಯಾಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರನ್ನು ಪತ್ರಕರ್ತರು ಮಾತಿಗೆ ಎಳೆದು ಚುನಾವಣೆ ಸಮೀಪಿಸುತ್ತಿರುವಾಗ ಕಾಂಗ್ರೆಸ್ ಸಾಫ್ಟ್ ಹಿಂದುತ್ವವನ್ನು ಅನುಸರಿಸಲು ಆರಂಭಿಸಿದೆಯಾ ಎಂದು ಕೇಳಿದಾಗ ಅವರು ಮೇಲಿನಂತೆ ಸುದ್ದಿಗಾರರನ್ನೇ ಪ್ರಶ್ನಿಸಿದರು.

ಕಾಂಗ್ರೆಸ್‌ನವರಾದ ನಾವೇನು ಅಸ್ಪೃಶ್ಯರಾ ? ಕೇವಲ ಬಿಜೆಪಿಯವರು ಮಾತ್ರ ದೇವಸ್ಥಾನಗಳಿಗೆ ಹೋಗ್ಬೇಕೆಂದು ಇದೆಯಾ ? ಎಂದು ಕೇಳಿದ ಪ್ರಮೋದ್, ಗಾಂಧಿ ಕುಟುಂಬ ಮೊದಲಿನಿಂದಲೂ ದೇವಸ್ಥಾನಗಳಿಗೆ ಹೋಗುತ್ತಿದೆ. ಅವರಿಗೂ ಅದರಲ್ಲಿ ನಂಬಿಕೆ ಇದೆ ಎಂದರು. ಗಾಂಧಿ ಕುಟುಂಬವೇನೂ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗಲು ಆರಂಭಿಸಿದ್ದಲ್ಲ ಎಂದ ಅವರು ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ದೇವಸ್ಥಾನಗಳಿಗೆ ಭೇಟಿಯನು ಸಮರ್ಥಿಸಿಕೊಂಡರು.

ಇತ್ತೀಚೆಗೆ ಕರಾವಳಿಯ ಮೂವರು ಪ್ರಮುಖ ಮೀನುಗಾರ ಮುಖಂಡರ ಮತ್ಸ್ಯ ಘಟಕಗಳು, ಮನೆಗಳ ಮೇಲೆ ಐಟಿ ದಾಳಿಯ ನಿಜವಾದ ಟಾರ್ಗೆಟ್ ನೀವಾಗಿದ್ದಿರಬಹುದೇ ಎಂದು ಪ್ರಶ್ನಿಸಿದಾಗ, ನನ್ನನ್ನು ಆ ದೇವರು ಮಾತ್ರ ಟಾರ್ಗೆಟ್ ಮಾಡಲು ಸಾಧ್ಯ, ಇನ್ಯಾರಿಗೂ ಸಾಧ್ಯವಿಲ್ಲ ಎಂದು ಗಡುಸಾಗಿ ಉತ್ತರಿಸಿದರು.

ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಇದುವರೆಗೆ ಯಾರಿಂದಲೂ ಫಂಡ್ ತೆಗೆದುಕೊಂಡಿಲ್ಲ. ಕಳುಹಿಸಿದವರ ಫಂಡನ್ನೂ ಹಿಂದಿರುಗಿಸಿದ್ದೇನೆ. ಚುನಾವಣೆಗೆ ಫಂಡಿಂಗ್ ಮಾಡುವವರ ಅಗತ್ಯವೇ ನನಗಿಲ್ಲ. ನಾನು ಪ್ರಾಮಾಣಿಕನಾಗಿ ತೆರಿಗೆ ಕಟ್ಟುತ್ತೇನೆ. ಕಾನೂನಿನಂತೆ ಪ್ರಾಮಾಣಿಕನಾಗಿ ತೆರಿಗೆ ಕಟ್ಟುತ್ತೇನೆ. ಹೀಗಾಗಿ ಕೇಂದ್ರ ಸರಕಾರದ ಟಾರ್ಗೆಟ್‌ಗೆ ನಾನು ಹೆದರುವುದಿಲ್ಲ ಎಂದರು. 

ನಾನು ಹೆದರುವುದು ದೇವರ ಟಾರ್ಗೆಟ್‌ಗೆ ಮಾತ್ರ. ದೇವರ ಟಾರ್ಗೆಟ್ ಅನುಭವಕ್ಕೆ ಬರುತ್ತೆ ಎಂದರು. ಮತ್ಸ್ಯೋದ್ಯಮಿಗಳ ಮೇಲಿನ ಐಟಿ ದಾಳಿ ಕುರಿತು ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಪ್ರತಿಕ್ರಿಯೆ ನೀಡದಿರಲು ಕಾರಣವನ್ನೂ ಕೊಡುವುದಿಲ್ಲ ಎಂದರು.

ಬಿಜೆಪಿ ಸೇರಲ್ಲ: ನಾನು ಬಿಜೆಪಿ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಈ ಮಾತನ್ನು ಯಾವುದೇ ಕಾಂಗ್ರೆಸ್ ಕಾರ್ಯಕರ್ತನೂ ಹೇಳಿಲ್ಲ. ಜನರು ಈ ಬಗ್ಗೆ ಮಾತನಾಡುತ್ತಿಲ್ಲ. ಇದು ಕೇವಲ ನಿಮ್ಮ ತಲೆಯಲ್ಲಿ ಮೂಡುವ ಪ್ರಶ್ನೆ. ನನ್ನನ್ನು ನೋಡಿದಾಗಲೆಲ್ಲಾ ಕೇಳುವ ನಿಮ್ಮ ಫೆವರೀಟ್ ಪ್ರಶ್ನೆ. ಈ ಪ್ರಶ್ನೆ ಕೇಳುವ ಹಾಗೂ ವಿಮರ್ಶಿಸುವ ಸಂಪೂರ್ಣ ಅಧಿಕಾರ ನಿಮಗಿದೆ ಎಂದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದಿನ ವಾರ ಮಲ್ಪೆಯಲ್ಲಿ ಮೀನುಗಾರರ ಸಮಾವೇಶ ಮಾಡುವ ಕುರಿತು ಪ್ರಶ್ನಿಸಿದಾಗ, ಮೀನುಗಾರರೇನು ಅವರ ಮಾತಿಗೆ ಮರಳಾಗುವ ಮೂರ್ಖರಲ್ಲ. ಮೀನುಗಾರರಿಗೆ ಕೇಂದ್ರ ಸರಕಾರ 4 ವರ್ಷದಲ್ಲಿ ಹಾಗೂ ರಾಜ್ಯ ಸರಕಾರ 4ವರ್ಷ 9 ತಿಂಗಳು  ಏನೇನು ಮಾಡಿದೆ ಎಂಬುದು ಅವರಿಗೆ ಗೊತ್ತಿದೆ ಎಂದರು.

ರಾಜ್ಯ ಸರಕಾರ ಮಾತ್ರ ಡೀಸೆಲ್‌ ಮೇಲೆ ಲೀ.ಗೆ 8ರೂ. ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಿದೆ. ಕೇಂದ್ರ ಸರಕಾರ ನೀಡಿದೆಯಾ ?. ಡೀಸೆಲ್, ಸೀಮೆಎಣ್ಣೆಯನ್ನ ಬಡ ಮೀನುಗಾರ ಖರೀದಿಸಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ ಅವರು, ಕೇಂದ್ರ ಮೀನುಗಾರರಿಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸಿದ ಅವರು, ಇದನ್ನೆಲ್ಲಾ ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು. 

ರಾಹುಲ್ ಗಾಂಧಿ ಅವರು ತನ್ನ ಭಾಷಣದಲ್ಲಿ ಎಲ್ಲಿಯೂ ಇಂಡಿಯನ್ ಪೊಲೀಸ್ ಸರ್ವಿಸ್ ಎಂದರೆ ಪಕೋಡ ಸರ್ವಿಸ್ ಎಂದು ಹೇಳಿದ್ದರೆ ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ. ಅವರು ಐಪಿಎಸ್ ಎಂದರೆ ಪಕೋಡ ಸರ್ವಿಸ್ ಎಂದು ಹೇಳಿದ್ದಾರೆ. ಇಂಥ ಪದಗಳಿಗೆ ಬೇರೆ ಬೇರೆ ಅರ್ಥ ಹುಡುಕಲು ಸಾಧ್ಯವಿದೆ. ಉದಾಹರಣೆಗೆ ಐಟಿ ಎಂದರೆ ಇನ್‌ಕಮ್ ಟ್ಯಾಕ್ಸ್ ಆಗಬಹುದು, ಇನ್‌ಫಾರ್ಮೆಶನ್ ಟೆಕ್ನಾಲಜಿಯೂ ಆಗಬಹುದು. ಹೀಗಾಗಿ ರಾಹುಲ್ ಪೊಲೀಸ್ ಸರ್ವಿಸ್‌ಗೆ ಪಕೋಡವನ್ನು ಸಮೀಕರಿಸಿದ್ದರೆ ತೋರಿಸಿ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News