ಪಣಂಬೂರು : ಯುವಕನ ಲೂಟಿಗೈದ ಆರೋಪಿಗಳ ಬಂಧನ
ಮಂಗಳೂರು, ಫೆ.13: ಸ್ನೇಹಿತನ ಜತೆಗೂಡಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಲೂಟಿಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂದರ್ ನಿವಾಸಿ ಮುಹಮ್ಮದ್ ಫವಾದ್ (21) ಮತ್ತು ಕಂಕನಾಡಿ ನಿವಾಸಿ ಮುಹಮ್ಮದ್ ಅಫ್ರಿದಿ (19) ಬಂಧಿತ ಆರೋಪಿಗಳು.
ಪಶ್ಚಿಮ ಬಂಗಾಳ ಮೂಲದ ವಾಣೇಕರ್ ಎಂಬವರ ಜೊತೆಗೂಡಿ ರಾಜು ಸರಕಾರ್ ಎಂಬವರು ಫೆ.11ರಂದು ರಾತ್ರಿ 8:30ಕ್ಕೆ ಬೈಕಂಪಾಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ರಾಜು ಸರಕಾರ್ ಅವರನ್ನು ತಡೆದುನಿಲ್ಲಿಸಿ ಅವರ ಬಳಿಯಿದ್ದ ಎರಡು ಮೊಬೈಲ್ ಹಾಗೂ 130 ರೂ. ನಗದು ಕಿತ್ತು ಪರಾರಿಯಾದರು.
ಈ ಬಗ್ಗೆ ರಾಜು ಸರಕಾರ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ಮಂಗಳವಾರ ಪಣಂಬೂರು ಸಮೀಪದ ಕುದುರೆಮುಖ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ದೋಚಿದ್ದ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಸೆರೆ ವಿಧಿಸಲಾಗಿದೆ