ಇಂಡಿಯನ್ ಮುಜಾಹಿದ್ದೀನ್‌ನ ಶಂಕಿತ ಉಗ್ರನ ಬಂಧನ

Update: 2018-02-14 15:15 GMT

ಹೊಸದಿಲ್ಲಿ, ಫೆ. 14: ದಿಲ್ಲಿ ಪೊಲೀಸರ ವಿಶೇಷ ಘಟಕ ಬುಧವಾರ ಕಾರ್ಯಾಚರಣೆ ನಡೆಸಿ ಇಂಡಿಯನ್ ಮುಜಾಹಿದ್ದೀನ್‌ನ 32 ವರ್ಷದ ಶಂಕಿತ ಉಗ್ರ ಆರಿಝ್ ಖಾನ್ ಅಲಿಯಾಸ್ ಜುನೈದ್‌ನನ್ನು ಬಂಧಿಸಿದೆ. 2008 ಸೆಪ್ಟಂಬರ್‌ನಲ್ಲಿ ನಡೆದ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಪೊಲೀಸರು ಇಂಡಿಯನ್ ಮುಜಾಹಿದ್ದೀನ್‌ನ ಇಬ್ಬರು ಶಂಕಿತರನ್ನು ಕೊಂದಿದ್ದರು. ಇತರ ಇಬ್ಬರನ್ನು ಬಂಧಿಸಿದ್ದರು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಮೃತಪಟ್ಟಿದ್ದರು. ಜುನೈದ್ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಜುನೈದ್‌ನನ್ನು ಭಾರತ-ನೇಪಾಳ ಗಡಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜುನೈದ್ ಬಂಧನವನ್ನು ಡಿಸಿಪಿ (ವಿಶೇಷ ಘಟಕ) ಪಿ.ಎಸ್. ಕುಶ್ವಾಲ್ ದೃಢಪಡಿಸಿದ್ದಾರೆ.

‘‘ಜುನೈದ್ 2008ರಿಂದ ನಾಪತ್ತೆಯಾಗಿದ್ದ. ಉತ್ತರಪ್ರದೇಶದ ಅಝಮ್‌ಗಡದ ನಿವಾಸಿಯಾಗಿದ್ದ ಈತ ವೃತ್ತಿಯಲ್ಲಿ ಎಂಜಿನಿಯರ್. ವಿಶೇಷ ಘಟಕ ಶೋಧ ಕಾರ್ಯಚರಣೆ ನಡೆಸುತ್ತಿದ್ದ ಸಂದರ್ಭ ಈತ ಜಾಮಿಯಾ ನಗರದ ಬಾಟ್ಲಾ ಹೌಸ್‌ನಲ್ಲಿರುವ ಎಲ್-18 ಸಂಖ್ಯೆಯ ಮನೆಯಲ್ಲಿ ಅವಿತುಕೊಂಡಿದ್ದ ಎಂದು ಹೇಳಲಾಗಿತ್ತು’’ ಎಂದು ಪೊಲೀಸರು ತಿಳಿಸಿದ್ದಾರೆ. ದಿಲ್ಲಿಯ ಪಹಾರ್‌ಗಂಜ್, ಬಾರಖಂಬ ರಸ್ತೆ, ಕನ್ಹೌಟ್ ಪ್ಲೇಸ್, ಗ್ರೇಟರ್ ಕೈಲಾಸ್ ಹಾಗೂ ಗೋವಿಂದ ಪುರಿಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ 30 ಮಂದಿ ಮೃತಪಟ್ಟು 100 ಮಂದಿ ಗಾಯಗೊಂಡ ಆರು ದಿನಗಳ ಬಳಿಕ ಬಾಟ್ಲಾಹೌಸ್ ಎನ್‌ಕೌಂಟರ್ ನಡೆಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ ಜುನೈದ್‌ನ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಈತನ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ದಿಲ್ಲಿ ಪೊಲೀಸರು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News