ನುಡಿದಂತೆ ನಡೆಯುವ ಸರಕಾರ’ ಖ್ಯಾತಿಗೆ ಚ್ಯುತಿ ತರಬೇಡಿ: ಅಧಿಕಾರಿಗಳಿಗೆ ಸಚಿವ ಕಾಗೋಡು ತಿಮ್ಮಪ್ಪ ಮನವಿ

Update: 2018-02-14 15:24 GMT

ಬೈಂದೂರು, ಫೆ.14: ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಆದ್ಯತೆ ನೀಡಿದೆ. ಅದು ಎದ್ದು ಕಾಣುವಂತೆ ಆಡಳಿತ ನಡೆಯಬೇಕಾಗಿದೆ. ನುಡಿದಂತೆ ನಡೆಯುವುದು ನಮ್ಮ ಸರಕಾರದ ಗುರಿ. ಇದಕ್ಕೆ ಚ್ಯುತಿ ತರುವಂತೆ ಮಾಡಬೇಡಿ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ಬೈಂದೂರಿನ ತಹಶೀಲ್ದಾರರ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂಗಳ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರದ ಕಡೆಯಿಂದ ಹೊರಡಿಸುವ ಆದೇಶ, ಸುತ್ತೋಲೆಗಳನ್ನು ಸರಿಯಾಗಿ ಓದಿ, ಗ್ರಹಿಸಿ ಅದನ್ನು ಸರಿಯಾಗಿ ಅನುಷ್ಠಾನಗೊಳಿಸಲು ಪ್ರಯತ್ನಿಸಿ. ಇವುಗಳನ್ನು ಜಾರಿಗೊಳಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಿದರೆ ಅಧಿಕಾರಿಗಳಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಕಾಗೋಡು ನುಡಿದರು.

ತೀರ್ಥಯಾತ್ರೆ ಬೇಕಾಗಿಲ್ಲ:  ರಾಜ್ಯದಲ್ಲಿ ಜಾಗದ ಹಕ್ಕು ಪಡೆಯುವ ಬಗ್ಗೆ ಅರ್ಜಿ ಸಲ್ಲಿಸಿರುವ ಯಾವೊಬ್ಬ ಅರ್ಹರು ತಪ್ಪಿ ಹೋಗಬಾರದು. ಮಾಹಿತಿಯ ಕೊರತೆಯಿಂದ ಯಾರಾದರೂ ಇನ್ನೂ ಅರ್ಜಿ ಸಲ್ಲಿಸದಿದ್ದರೆ, ಅಂಥವರನ್ನು ಪತ್ತೆ ಹಚ್ಚಿ ಅವರಿಂದ ಅರ್ಜಿಯನ್ನು ಪಡೆದು ಪರಿಶೀಲಿಸಿ ಹಕ್ಕು ಪತ್ರವನ್ನು ನೀಡುವ ಕೆಲಸ ಮಾಡಿ ಪುಣ್ಯಕಟ್ಟಿ ಕೊಳ್ಳಿ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಪುಣ್ಯ ಸಂಪಾದನೆಗಾಗಿ ತಿರುಪತಿ, ಧರ್ಮಸ್ಥಳಕ್ಕೆ ತೀರ್ಥಯಾತ್ರೆ ಮಾಡಬೇಕಾಗಿಲ್ಲ ಎಂದು ಲಘುದಾಟಿಯಲ್ಲಿ ನುಡಿದರು.

ಸ್ಥಳ ಪರಿಶೀಲನೆಗಾಗಿ ಗ್ರಾಮಲೆಕ್ಕಿಗರು ಹಾಗೂ ಸಂಬಂಧ ಪಟ್ಟ ಗ್ರಾಪಂನ ಪಿಡಿಒಗಳು ಜಂಟಿಯಾಗಿ ನಕ್ಷೆಯೊಂದಿಗೆ ತೆರಳಿ ಪರಿಶೀಲನೆ ನಡೆಸುವಂತೆ ಹಾಗೂ ಅರ್ಜಿ ಹಾಕಲು ಬಿಟ್ಟು ಹೋಗಿರುವವರಿಂದ ಅರ್ಜಿ ಪಡೆಯುವಂತೆ ಹೇಳಿದ ಸಚಿವರು, ಇದಕ್ಕಾಗಿ ವೇಳಾಪಟ್ಟಿ ನಿಗದಿಪಡಿಸಿಕೊಂಡು ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ಯಾವುದೇ ಕಾರಣಕ್ಕೂ ಅಧಿಕಾರಿಗಳಲ್ಲಿ ಉದಾಸೀನ ಪ್ರವೃತ್ತಿಯನ್ನು ನಾನು ಸಹಿಸುವುದಿಲ್ಲ. ಭೂಮಿಯ ಹಕ್ಕು ಅಲ್ಲಿ ವಾಸಿಸುವವನಿಗೆ ದೊರೆಯಲೇಬೇಕು ಎಂದು ಸ್ಪಷ್ಟವಾದ ಧ್ವನಿಯಲ್ಲಿ ನುಡಿದರು.

ಮೂಲಗೇಣಿ ಕುರಿತಂತೆ ಹೈಕೋರ್ಟ್‌ನಲ್ಲಿ ತಡೆ ಇದ್ದು, ಶೀಘ್ರದಲ್ಲಿ ತಡೆಯನ್ನು ತೆರವುಗೊಳಿಸಿ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಡೀಮ್ಡ್ ಪಾರೆಸ್ಟ್‌ಗೆ ಸಂಬಂಧ ಪಟ್ಟಂತೆ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಸಚಿವರು, ಅರಣ್ಯ ಭೂಮಿಗೆ ಸಂಬಂದಪಟ್ಟ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮರಳು ನೀತಿ: ಉಡುಪಿ ಮತ್ತು ದ.ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಜನಾಭಿಪ್ರಾಯದಂತೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದ ರೀತಿಯಲ್ಲಿ ಬೈಂದೂರು ತಾಲೂಕು ರಚನೆಯಾಗಿದೆ. ನೂತನ ತಾಲೂಕಿಗೆ ಅಗತ್ಯ ಸಿಬ್ಬಂದಿ ನಿಯೋಜನೆ, ತಾಲೂಕು ಪಂಚಾಯತ್ ಕಟ್ಟಡ, ತಾಲೂಕು ನ್ಯಾಯಾಲಯ, ಮಿನಿ ವಿಧಾನಸೌಧ ನಿರ್ಮಿಸಿ ಮಾದರಿ ತಾಲೂಕನ್ನಾಗಿ ರೂಪಿಸಲಾಗುವುದು. ಯಡ್ತರೆ ಬಳಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಈಗಾಗಲೇ 8 ಎಕ್ರೆ ಜಾಗ ಮಂಜೂರಾಗಿದ್ದು, 11 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ ಮತ್ತು ಡಿಪೋ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟ್ವಾಡಿ, ಶಂಕರ ಪೂಜಾರಿ, ಗೌರಿದೇವಾಡಿಗ, ಕೆಡಿಪಿ ಸದಸ್ಯ ರಾಜು ಪೂಜಾರಿ, ತಾಪಂ ಸದಸ್ಯರುಗಳು, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಸುಬ್ರಾಯ ಶೇರಿಗಾರ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಶಿವಾನಂದ ಕಾಪಶಿ, ಉಪವಿಭಾಗಾಧಿಕಾರಿ ಭೂಬಾಲನ್ ಮತ್ತಿತರರು ಉಪಸ್ಥಿತರಿದ್ದರು.

ಬೈಂದೂರು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಸ್ವಾಗತಿಸಿದರು. ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್ ವಂದಿಸಿ, ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದಲ್ಲಿ 50 ತಾಲೂಕು ಅಸ್ತಿತ್ವಕ್ಕೆ

ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ರಾಜ್ಯದಲ್ಲಿ 50 ಹೊಸ ತಾಲೂಕುಗಳನ್ನು ಅಧಿಕೃತವಾಗಿ ಘೋಷಿಸಿ, ಅಸ್ಥಿತ್ವಕ್ಕೆ ತಂದಿದ್ದೇವೆ. ರಾಜ್ಯ ದಲ್ಲೇ ಪ್ರಥಮವಾಗಿ ಬೈಂದೂರು ತಾಲೂಕನ್ನು ಇಲ್ಲಿ ಉದ್ಘಾಟಿಸಲಾಗಿದೆ. ತಾಲೂಕಿಗೆ ಅಗತ್ಯವಿರುವ ಮಿನಿ ವಿಧಾನಸೌಧ ನಿರ್ಮಾಣ ಕುರಿತಂತೆ ಅಂದಾಜುಪಟ್ಟಿ ಮತ್ತು ನೀಲನಕ್ಷೆಯನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಅದು ಕೈಸೇರಿದ ತಕ್ಷಣ ಪರಿಶೀಲಿಸಿ ಶೀಘ್ರದಲ್ಲಿ ಅನುಮೋದನೆ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ ಎಲ್ಲಾ 50 ತಾಲೂಕುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಭರವಸೆ ನೀಡಿದರು.


26 ಗ್ರಾಮಗಳ ಪುಟ್ಟ ತಾಲೂಕು

ಬೈಂದೂರು ತಾಲೂಕು ರಚನೆಯ ಹೋರಾಟಕ್ಕೆ ನಾಲ್ಕೂವರೆ ದಶಕಗಳ ಇತಿಹಾಸವಿದೆ. ಬೈಂದೂರು ಹೋಬಳಿಯ 26 ಹಾಗೂ ವಂಡ್ಸೆ ಹೋಬಳಿಯ 29 ಗ್ರಾಮಗಳನ್ನು ಬೈಂದೂರು ತಾಲೂಕಿಗೆ ಸೇರಿಸಬೇಕೆಂಬ ಬೇಡಿಕೆ ಇತ್ತು. ಆದರೆ ಈಗ ಬೈಂದೂರಿನಿಂದ ದೂರವಿದ್ದ ಹಾಗೂ ಕುಂದಾಪುರಕ್ಕೆ ಹತ್ತಿರವಿದ್ದ ಗ್ರಾಮಗಳನ್ನು ಅವುಗಳ ವಿರೋಧದಿಂದ ಕೈಬಿಡಲಾಗಿದೆ.

ಈಗ ಅಸ್ತಿತ್ವಕ್ಕೆ ಬಂದ ಬೈಂದೂರು ತಾಲೂಕು 26 ಗ್ರಾಮಗಳನ್ನೊಳಗೊಂಡ ರಾಜ್ಯದ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಒಂದೆನಿಸಿಕೊಂಡಿದೆ.

ತಾಲೂಕು ವ್ಯಾಪ್ತಿಗೆ ಬರುವ ಗ್ರಾಮಗಳು: ಶಿರೂರು, ಪಡುವರಿ, ಯಡ್ತರೆ, ಬೈಂದೂರು, ತಗ್ಗರ್ಸೆ, ಉಪ್ಪುಂದ, ಬಿಜೂರು, ನಂದನವನ, ಕೆರ್ಗಾಲು, ಕಿರಿಮಂಜೇಶ್ವರ, ಉಳ್ಳೂರು, ಕಂಬದಕೋಣೆ, ಹೇರಂಜಾಲು, ನಾವುಂದ, ಬಡಾಕೆರೆ, ಮರವಂತೆ, ಹಡವು, ನಾಡ, ಹೇರೂರು, ಕಾಲ್ತೋಡು, ಗೋಳಿಹೊಳೆ, ಯಳಜಿತ್, ಕೊಲ್ಲೂರು, ಜಡ್ಕಲ್, ಮುಧೂರು, ಹಳ್ಳಿಹೊಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News