ಬಗರ್‌ಹುಕುಂ: ಶೀಘ್ರದಲ್ಲೇ ಹಕ್ಕು ಪತ್ರ- ಸಚಿವ ಕಾಗೋಡು

Update: 2018-02-14 16:06 GMT

ಮಂಗಳೂರು, ಫೆ. 14: ಬಗರ್‌ಹುಕುಂ ಜಮೀನಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕಾನೂನು ತೊಡಕನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಭರವಸೆ ನೀಡಿದ್ದಾರೆ.

ಸುರತ್ಕಲ್ ಜಂಕ್ಷನ್‌ನಲ್ಲಿ ಬುಧವಾರ ಸರಕಾರಿ ಜಮೀನಿನಲ್ಲಿ ವಾಸವಾಗಿರುವವರಿಗೆ 94ಸಿಸಿ ಅಡಿಯಲ್ಲಿ ಜಾಗದ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ಬಗರ್‌ಹುಕುಂ ಜಮೀನಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಜಾಗ ಸಕ್ರಮಗೊಳಿಸಲು ತೊಡಕಿದೆ. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸಮಸ್ಯೆ ಯನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಈ ವಿಷಯದಲ್ಲಿ ಯಾರಿಗೂ ಅಂಜಿಕೆ ಬೇಡ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಉತ್ತಮ, ಪಾರದರ್ಶಕ ಆಡಳಿತ ನೀಡಬೇಕು ಎನ್ನುವುದು ಮುಖ್ಯಮಂತ್ರಿಯ ಆದೇಶವಾಗಿದೆ. ಅದನ್ನು ಅಧಿಕಾರಿಗಳು ಪಾಲನೆ ಮಾಡಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದರು.

ಹಣ ಕೇಳಿದರೆ ದೂರು ನೀಡಿ

ಗದ ಹಕ್ಕುಪತ್ರ ನೀಡಲು ಅಥವಾ ಇನ್ನಿತರ ಸರಕಾರಿ ಕೆಲಸಗಳಿಗೆ ಅಧಿಕಾರಿಗಳು ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಡಬಾರದು. ಒಂದು ವೇಳೆ ಅಧಿಕಾರಿಗಳು ಹಣ ಪಡೆಯುವುದು ಗೊತ್ತಾದರೆ ಅಂಥವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳುವುದಾಗಿ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರಲ್ಲದೆ, ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ಕೂಡಲೇ ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕೆಂದರು.

ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರಕಾರ ಖಜಾನೆಯನ್ನು ಲೂಟಿ ಹೊಡೆದಿದ್ದು ಮಾತ್ರವಲ್ಲ. ಸರ್ಕಾರಿ ಜಮೀನಿನಲ್ಲಿ ವಾಸವಾಗಿರುವವರಿಗೆ 1.3 ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮ ತಂದಿದ್ದರು. ಇದರಿಂದ ಜನರನ್ನು ರಕ್ಷಿಸಲು ಇಡೀ ರಾಜ್ಯ ಪ್ರವಾಸ ಮಾಡಿದ್ದೇನೆ. ಏಕರೂಪದ ಕಾನೂನು ತಂದು ಎಲ್ಲರಿಗೂ ಅನುಕೂಲ ಮಾಡಿದ್ದೇವೆ. ಅದರ ಫಲವಾಗಿ ಇಂದು ಸರಕಾರಿ ಜಮೀನಿನಲ್ಲಿ ವಾಸ ಮಾಡಿರುವವರು ಹಕ್ಕುಪತ್ರ ಪಡೆಯುತ್ತಿದ್ದಾರೆ. ಶಾಸಕ ಮೊಯ್ದಿನ್ ಬಾವರ ಸಹಿತ ಎಲ್ಲ ಶಾಸಕರೂ ಪ್ರಾಮಾಣಿಕತೆಯಿಂದ ಜನರಿಗೆ ಈ ಸೌಲಭ್ಯ ಒದಗಿಸುತ್ತಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ವಾರದೊಳಗೆ ಎಲ್ಲರಿಗೆ ಹಕ್ಕುಪತ್ರ: ಶಾಸಕ ಬಾವ

ಶಾಸಕ ಮೊಯ್ದಿನ್ ಬಾವ ಮಾತನಾಡಿ, ಒಂದು ವಾರದೊಳಗೆ ಕ್ಷೇತ್ರದ ಎಲ್ಲರಿಗೂ ಸರಕಾರಿ ಜಮೀನಿನಲ್ಲಿ ವಾಸವಾಗಿರುವವರಿಗೆ ಹಕ್ಕು ಪತ್ರವನ್ನು ವಿತರಿಸುವುದಾಗಿ ಹೇಳಿದರು.

ಸುರತ್ಕಲ್ ಮತ್ತು ಗುರುಪುರ ಹೋಬಳಿಯ ಎಲ್ಲ 8,900 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುವುದು. ಇನ್ನೊಂದು ವಾರದೊಳಗೆ ಆಯಾ ಪ್ರದೇಶಗಳಿಗೆ ತೆರಳಿ ಹಕ್ಕು ಪತ್ರ ವಿತರಿಸುವುದಾಗಿ ಅವರು ಹೇಳಿದರು.

ಬಗರ್‌ಹುಕುಂ, ಅರಣ್ಯ ಪ್ರದೇಶ, ಸಿಆರ್‌ಝಡ್ ವ್ಯಾಪ್ತಿಯೊಳಗೆ ಮನೆ ಕಟ್ಟಿ ವಾಸಿಸುತ್ತಿರುವ ಇನ್ನೂ ಸಾವಿರಾರು ಕುಟುಂಬಗಳಿದ್ದು, ಅವರಿಗೂ ಜಾಗದ ಹಕ್ಕುಪತ್ರ ನೀಡುವಂತಾಗಬೇಕು ಎಂದು ಶಾಸಕರು ಇದೇ ಸಂದರ್ಭದಲ್ಲಿ ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಬಶೀರ್ ಅಹ್ಮದ್, ಮೂಡ ಸದಸ್ಯ ಕೇಶವ ಸನಿಲ್, ತಾ.ಪಂ. ಸದಸ್ಯೆ ವಜ್ರಾಕ್ಷಿ ಶೆಟ್ಟಿ, ತಹಶೀಲ್ದಾರ್, ಕುಮಾರ್ ಮೆಂಡನ್, ಕಂದಾಯ ನಿರೀಕ್ಷಕ ನವೀನ್, ಅಬ್ದುಲ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News