ಹನಿ ಟ್ರ್ಯಾಪ್ ಸಂಶಯ: ಕರ್ನಲ್ ಕಚೇರಿಯನ್ನು ಜಾಲಾಡಿದ ಸೇನಾ ಗುಪ್ತಚರ ಸಂಸ್ಥೆ

Update: 2018-02-14 16:24 GMT

ಭೋಪಾಲ್,ಫೆ.14: ಪಾಕಿಸ್ತಾನದ ಐಎಸ್‌ಐಯಿಂದ ಹನಿ ಟ್ರ್ಯಾಪ್ ಮಾಡಲ್ಪಟ್ಟಿರಬಹುದು ಎಂಬ ಸಂಶಯದ ಮೇರೆಗೆ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಕಚೇರಿಯಲ್ಲಿ ಸೇನಾ ಗುಪ್ತಚರ ಇಲಾಖೆಯ ಅಧಿಕಾರಿಗಳು ಶೋಧ ನಡೆಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಈ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಿಟ್ಟುಕೊಡದಿದ್ದರೂ ಮೂಲಗಳ ಪ್ರಕಾರ, ಸಂಶಯಕ್ಕೊಳಗಾಗಿರುವ ಅಧಿಕಾರಿ ಸೇನಾ ನೆಲೆಯ ಕಾರ್ಯಾಗಾರದಲ್ಲಿ ನಿಯೋಜನೆಯಲ್ಲಿದ್ದು ಅವರ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಆರ್ಥಿಕ ವ್ಯವಹಾರ ನಡೆದಿರುವುದೇ ಈ ಸಂಶಯಕ್ಕೆ ಕಾರಣ ಎಂದು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಅಧಿಕಾರಿಯು ಹನಿ ಟ್ರ್ಯಾಪ್‌ಗೆ ಒಳಗಾಗಿದ್ದಾರೆಯೇ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ನೋದ ಮುಖ್ಯಕಚೇರಿಯ ಅಧಿಕಾರಿಗಳು ಈ ಶೋಧಕಾರ್ಯವನ್ನು ನಡೆಸಿದ್ದಾರೆ. ಆರಂಭದಲ್ಲಿ ಸೇನಾ ಕೇಂದ್ರ ಮುಖ್ಯಕಚೇರಿಯಲ್ಲಿ ಕೆಲವು ಗಂಟೆಗಳ ಕಾಲ ಅಧಿಕಾರಿಯ ವಿಚಾರಣೆ ನಡೆಸಿ ಆನಂತರ ಮುಂದಿನ ವಿಚಾರಣೆಗಾಗಿ ಲಕ್ನೋಗೆ ಕರೆತರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಿದ ಆರೋಪದಲ್ಲಿ ಐಎಎಫ್ ಅಧಿಕಾರಿಯನ್ನು ಬಂಧಿಸಲಾಗಿತ್ತು. ಈ ಅಧಿಕಾರಿಯನ್ನು ಹನಿ ಟ್ರ್ಯಾಪ್‌ಗೊಳಪಡಿಸಲು ಐಎಸ್‌ಐಗೆ ಏಳು ತಿಂಗಳು ಹಿಡಿದಿತ್ತು ಎಂದು ವಿಚಾರಣೆಯ ವೇಳೆ ತಿಳಿದುಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News