ನಿರಪರಾಧಿಗಳ ಬಿಡುಗಡೆಗೆ ಒತ್ತಾಯ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ಡಿಸಿಗೆ ಮನವಿ

Update: 2018-02-14 16:50 GMT

ಮಂಗಳೂರು, ಫೆ. 14: ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ನಿರಪರಾಧಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಸುರತ್ಕಲ್ ಮುಸ್ಲಿಂ ಐಕ್ಯತಾ ವೇದಿಕೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ದೀಪಕ್ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಹಾಗೂ ಹತ್ಯೆಗೆ ಪ್ರಚೋದನೆ ನೀಡಿದವರನ್ನೂ ಬಂಧಿಸಿರುವುದು ಶ್ಲಾಘನೀಯ. ಆದರೆ, ಪಣಂಬೂರು ಎಸಿಪಿ ನೇತೃತ್ವದ ಪೊಲೀಸ್ ತಂಡವು ದೀಪಕ್ ಹತ್ಯೆ ಪ್ರಕರಣದ ತನಿಖೆಯ ಹೆಸರಿನಲ್ಲಿ ಕೃಷ್ಣಾಪುರ ಪರಿಸರದ ಹಲವು ಯುವಕರನ್ನು ಠಾಣೆಗೆ ಕರೆಸಿ 4-5 ದಿನಗಳ ಕಾಲ ನಿರಂತರ ವಿಚಾರಣೆ ನಡೆಸಿರುತ್ತಾರೆ. ಆ ಪೈಕಿ ಕೃಷ್ಣಾಪುರದ 6 ಮಂದಿ ನಿರಪರಾಧಿ ಯುವಕರನ್ನು ಹತ್ಯೆಯಲ್ಲಿ ಸಹಕರಿಸಿದ್ದಾರೆ ಎಂದು ಕಟ್ಟು ಕಥೆಯನ್ನು ಕಟ್ಟಿ ಬಂಧಿಸಿದ್ದಾರೆ. ಪೊಲೀಸರ ಈ ಕ್ರಮವು ದೀಪಕ್ ರಾವ್ ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ರಕ್ಷಿಸುವ ದುರುದ್ದೇಶ ಹೊಂದಿದೆಯೇ ಎಂಬ ಅನುಮಾನ ಮೂಡುವಂತಿದೆ ಎಂದು ವೇದಿಕೆ ಮನವಿಯಲ್ಲಿ ತಿಳಿಸಿದೆ.

ಆದ್ದರಿಂದ ಹತ್ಯೆ ಪ್ರಕರಣವನ್ನು ಉನ್ನತ ಅಧಿಕಾರಿಗಳಿಂದ ಮರು ತನಿಖೆಗೊಳಪಡಿಸಬೇಕು. ನಿಜವಾದ ಹಂತಕರು ಮತ್ತು ಹತ್ಯೆಯ ಹಿಂದಿರುವ ಕಾಣದ ಕೈಗಳನ್ನು ಸಮಾಜದ ಮುಂದೆ ತರಬೇಕು. ನಿರಪರಾಧಿಗಳನ್ನು ಪ್ರಕರಣದಿಂದ ಕೈಬಿಡಬೇಕು ಎಂದು ವೇದಿಕೆ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಉಪಾಧ್ಯಕ್ಷರಾದ ಅದ್ದು, ಶರೀಫ್ ಚೊಕ್ಕಬೆಟ್ಟು, ಕೋಡಿಜಾಲ್ ಇಬ್ರಾಹೀಂ, ಜಲೀಲ್ ಕೃಷ್ಣಾಪುರ, ಅಝೀಝ್ ಸುರತ್ಕಲ್ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News