×
Ad

ಕರಾವಳಿಯ ಕಂದಾಯ ಸಮಸ್ಯೆ ಚರ್ಚಿಸಲು ವಾರದೊಳಗೆ ಸಭೆ: ಸಚಿವ ಕಾಗೋಡು ತಿಮ್ಮಪ್ಪ

Update: 2018-02-14 22:26 IST

ಕಾಪು, ಫೆ.14: ಕರಾವಳಿ ಭಾಗದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದು, ಇದನ್ನು ಅತ್ಯವಶ್ಯಕವಾಗಿ ಬಗೆಹರಿಸಲೇಬೇಕಾಗಿದೆ. ಈ ಕುರಿತು ಚರ್ಚಿಸಲು ಕರಾವಳಿ ಶಾಸಕರೊಂದಿಗೆ ವಾರದೊಳಗೆ ವಿಶೇಷ ಸಭೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ನೂತನ ಕಾಪು ತಾಲೂಕು ಉದ್ಘಾಟನೆಯನ್ನು ಬುಧವಾರ ಕಾಪು ಬಂಗ್ಲೆ ಮೈದಾನದಲ್ಲಿ ನೆರವೇರಿಸಿ ಅವರು ಮಾತನಾಡುತಿದ್ದರು. ಕಾಪು ತಾಲೂಕಿಗೆ ಪೂರಕವಾಗಿ ಅನುದಾನ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ಕಾಪುವನ್ನು ಮಾದರಿ ತಾಲೂಕನ್ನಾಗಿ ಪರಿವರ್ತಿಸುವ ಜವಾಬ್ದಾರಿಯೂ ಸರಕಾರ ದ್ದಾಗಿದೆ. ಈ ನಿಟ್ಟಿನಲ್ಲಿ ಕಾಪು ತಾಲೂಕಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನೂ ತಿಂಗಳ ಅಂತ್ಯದೊಳಗೆ ಒದಗಿಸಲು ಬದ್ಧ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ತಾಲೂಕು ರಚನೆಯಾಗುತ್ತಲೇ ಸರಕಾರದ ಎಲ್ಲಾ ಕಚೇರಿಗಳೂ ಕಾಪು ವಿಗೆ ಬರಲಿವೆ. ಇದರಿಂದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಕಾಪು ಬಂಗ್ಲೆ ಮೈದಾನವನ್ನು ಸರಕಾರಿ ಕಾಂಪ್ಲೆಕ್ಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಅದಕ್ಕೂ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಪಾಶಿ, ಕಾಪು ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್.ಉಸ್ಮಾನ್, ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್, ಚರ್ಚ್‌ನ ಧರ್ಮಗುರು ರೆ.ಫಾ.ಫರ್ಡಿನಾಂಡ್ ಗೊನ್ಸಾಲ್ವಿಸ್, ರೆ.ಫಾ.ರಾಕ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿಗಳಾದ ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ ಚಂದ್ರ ಜೆ. ಶೆಟ್ಟಿ, ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಕಾಪು ಲೀಲಾಧರ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ವಿವಿಧ ಸೌಲಭ್ಯವನ್ನು ವಿತರಿಸಲಾಯಿತು. ಪ್ರಭಾರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News