ರಾಹುಲ್ ಭೇಟಿಯಿಂದ ಪಕ್ಷಕ್ಕೆ ಚೈತನ್ಯ: ಕಾಗೋಡು ತಿಮ್ಮಪ್ಪ
ಉಡುಪಿ, ಫೆ.14: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿಯಿಂದ ಪಕ್ಷಕ್ಕೆ ಚೈತನ್ಯ ಬಂದಿದೆ. ಮಾಧ್ಯಮಗಳ ಪ್ರಚಾರವೇ ನಮಗೆ ಹೆಚ್ಚು ಶಕ್ತಿಯನ್ನು ತಂದುಕೊಟ್ಟಿದೆ ಎಂದು ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ಬ್ರಹ್ಮಾವರ ತಾಲೂಕು ಉದ್ಘಾಟನೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ಸಂಘಟನೆಯ ಕಾರ್ಯವನ್ನು ರಾಹುಲ್ ಗಾಂಧಿ ರಾಜ್ಯದಲ್ಲಿ ಆರಂಭಿಸಿದ್ದಾರೆ. ಹೀಗಾಗಿ ನಮ್ಮ ಪಕ್ಷ ಕೂಡ ಬಲಗೊಳ್ಳುತ್ತಿದೆ ಎಂದರು.
ತಮ್ಮ ಸಾಗರ ಕ್ಷೇತ್ರದಲ್ಲಿ ಜಯಮಾಲ ಸ್ಪರ್ಧಿಸುವ ಕುರಿತ ಪ್ರಶ್ನೆಗೆ ಪ್ರತಿಕ್ರಿ ಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರು ಎಲ್ಲಿ ಸಹ ಸ್ಪರ್ಧೆ ಮಾಡಬಹುದು. ಆ ಸ್ವಾತಂತ್ರ ಅವರಿಗೆ ಇದೆ. ನಾನು ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇವೆ ಎಂದರು.
ಎಲ್ಲ ರಾಜರಿಗೆ ರಾಜ್ಯವೇ ಮುಖ್ಯ: ಬಹುಮನಿ ಸುಲ್ತಾರ ದಿನಾಚರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಆ ಬಗ್ಗೆ ಏನು ತಿಳಿದಿಲ್ಲ ಎಂದರು. ಬಹುಮನಿ ಸುಲ್ತಾರು ಕನ್ನಡಿಗರನ್ನು ಗುಲಾಮರನ್ನಾಗಿ ನೋಡಿಕೊಂಡಿದ್ದಾರೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಸಮಯದಲ್ಲಿ ನಾನು ಹುಟ್ಟಿಲ್ಲ, ನೀವು ಹುಟ್ಟಿರಲಿಲ್ಲ. ಚರಿತ್ರೆ ಬರೆದವರು ಯಾವ ರೀತಿ ಬರೆದಿದ್ದರೋ ಗೊತ್ತಿಲ್ಲ ಎಂದು ಹೇಳಿದರು.
ಪ್ರತಿಯೊಂದು ಕಾಲದಲ್ಲಿ ರಾಜರು ಅವರವರ ರಾಜ್ಯ ಮತ್ತು ಸಾರ್ವ ಭೌಮತೆಯನ್ನು ಉಳಿಸಿಕೊಳ್ಳಲು ಅವರದ್ದೆ ಆದ ನೀತಿಯನ್ನು ಅನುಸರಿಸಿ ಕೊಂಡು ಬರುತ್ತಿದ್ದರು. ಅವರಿಗೆ ತಮ್ಮ ರಾಜ್ಯಾಡಳಿತ ಉಳಿಯಬೇಕೆಂಬುದು ಮುಖ್ಯವಾಗಿತ್ತು. ಜನರ ಬದುಕಿನ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆಗಲೇ ಜನರಿಗೆ ಉದ್ಯೋಗ, ಭೂಮಿಯನ್ನು ನೀಡುತ್ತಿದ್ದರೆ ಈಗ ಯಾಕೆ 94ಸಿಸಿ ತರಬೇಕಿತ್ತು. ಶಿವಪ್ಪ ನಾಯಕರಾಗಲಿ ಅಥವಾ ಬೇರೆ ರಾಣಿಯರಾಗಲಿ ಎಲ್ಲರು ಅವರವರ ಸಾಮ್ರಾಜ್ಯವನ್ನು ಉಳಿಸಿ ಬೆಳೆಸಿಕೊಂಡಿದ್ದಾರೆ. ಅವರಿಗೆ ಜನಹಿತ ಎರಡನೆಯದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವ 50 ಹೊಸ ತಾಲೂಕು ಕೂಡ ಈಗಾಗಲೇ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಗೆ ಬೇಕಾದ ಸಿಬ್ಬಂದಿಗಳ ಹುದ್ದೆಯನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹೆಬ್ರಿ ಸಹಿತ ನಾಲ್ಕು ಹೊಸ ತಾಲೂಕು ಘೋಷಣೆಯಾಗಿದ್ದು, ವೀರಪ್ಪ ಮೊಯಿಲಿ ದೂರವಾಣಿಯಲ್ಲಿ ಸಂಪರ್ಕಿಸಿ ನಾಲ್ಕೈದು ದಿನಗಳಲ್ಲಿ ಹೆಬ್ರಿಯನ್ನು ತಾಲೂಕನ್ನು ಉದ್ಘಾಟಿಸಲಾಗುವುದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಇರುವ ತಾಲೂಕು ಮಾತ್ರ ನಾವು ಉದ್ಘಾಟನೆ ಮಾಡುತ್ತಿಲ್ಲ. ಅಲ್ಲಿನ ಶಾಸಕರು ಕರೆದಿದ್ದಕ್ಕೆ ನಾನು ಬಂದು ಉದ್ಘಾಟನೆ ಮಾಡಿದ್ದೇನೆ. ತಾಲೂಕು ರಾಜ್ಯದ್ದೆ ಹೊರತು ಪಕ್ಷದಲ್ಲ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.