×
Ad

ಪುತ್ತೂರು : ಮೆಸ್ಕಾಂ ಕಚೇರಿಗೆ ಮತ್ತಿಗೆ-ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಎಚ್ಚರಿಕೆ

Update: 2018-02-14 23:03 IST

ಪುತ್ತೂರು, ಫೆ. 14: ಪುತ್ತೂರು ನಗರಸಭಾ ವ್ಯಾಪ್ತಿಯ ಕೆಮ್ಮಿಂಜೆ, ಮೊಟ್ಟೆತ್ತಡ್ಕ ಮತ್ತು ಆರ್ಯಾಪು ಪ್ರದೇಶದಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಇದರಿಂದ ಸಮಸ್ಯೆಗೊಳಗಾದ ಈ ಭಾಗದ ಸಾರ್ವಜನಿಕರು ನಗರಸಭೆಯ ಸದಸ್ಯರಾದ ಶೈಲಾ ಪೈ ಮತ್ತು ರಮೇಶ್ ರೈ ಅವರ ನೇತೃತ್ವದಲ್ಲಿ ಬುಧವಾರ ಪುತ್ತೂರಿನ ಬನ್ನೂರಿನಲ್ಲಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿರುವ ಕುರಿತು ಕಳೆದ ಗುರುವಾರ ನಾವು ಸಲ್ಲಿಸಿದ ಮನವಿಗೆ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಇನ್ನೆರಡು ದಿನಗಳೊಳಗಾಗಿ ವಿದ್ಯುತ್ ಕಡಿತದ ಬಗ್ಗೆ ಮತ್ತು ಟ್ರಾನ್ಸ್‌ಫಾರ್ಮರ್ ಕೇಬಲ್ ಬದಲಾವಣೆ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಮೆಸ್ಕಾಂ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಪುತ್ತೂರು ವಿಭಾಗದ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ ಅವರು ಅನಿಯಮಿತ ವಿದ್ಯುತ್ ಕಡಿತದಿಂದಾಗಿ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪರೀಕ್ಷಾ ದಿನಗಳು ಸಮೀಪಿಸುತ್ತಿರುವುದರಿಂದ ಮಕ್ಕಳ ವಿದ್ಯಾರ್ಜನೆಗೂ ಸಮಸ್ಯೆಯಾಗಿದೆ. ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿರುವ ಟ್ರಾನ್ಸ್‌ಫಾರ್ಮರ್‌ನ ಕೇಬಲ್ ಸುಟ್ಟು ಹೋಗಿ ನೇತಾಡುತ್ತಿದ್ದು, ಈ ಬಗ್ಗೆ ಹಲವು ಬಾರಿ ಮೆಸ್ಕಾಂಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಮೆಸ್ಕಾಂ ಕಚೇರಿಗೆ ಮತ್ತಿಗೆ ಹಾಕಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು.

ಸಮಸ್ಯೆಯನ್ನು ಆಲಿಸಿದ ಪುತ್ತೂರು ವಿಭಾಗದ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಪೂಜಾರಿ ಅವರು ಪ್ರಸ್ತುತ ಕ್ಯಾಂಪ್ಕೋ ಬಳಿಯಿರುವ 33ಕೆವಿ ಮತ್ತು ಸುಳ್ಯದ 33 ಕೆವಿ ಸಬ್‌ಸ್ಟೇಷನ್ ಒಂದೇ ಫೀಡರ್‌ನಲ್ಲಿದ್ದು, ಮಾಡಾವಿನಲ್ಲಿ 110ಕೆವಿ ಸಬ್‌ಸ್ಟೇಷನ್ ಆಗದೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಲೈನ್ ಆಕ್ಷೇಪ ಮತ್ತು ಸಾಮಾಜಿಕ ಅರಣ್ಯ ಪ್ರದೇಶದಲ್ಲಿರುವ ಕಾರಣ ಎದುರಾದ ಸಬ್‌ಸ್ಟೇಷನ್ ಜಾಗದ ಸಮಸ್ಯೆಯಿಂದಾಗಿ ಮಾಡಾವು 110ಕೆವಿ ವಿದ್ಯುತ್ ಸಬ್‌ಸ್ಟೇಷನ್ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಗೆ ಸಂಬಂಧಿಸಿ ಆರಂಭದ ಟೆಂಡರ್ ರದ್ದುಪಡಿಸಿ ಇದೀಗ ಮರು ಟೆಂಡರ್ ಪ್ರಕ್ರಿಯೆ ನಡೆದಿದ್ದು, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಸಂತ್ರಸ್ಥರಿಗೆ ರೂ.7 ಕೋಟಿ ಪರಿಹಾರ ನೀಡಬೇಕಿದೆ. ಈಗಾಗಲೇ ಗುತ್ತಿಗೆದಾರರು ರೂ.1 ಕೋಟಿ ಪರಿಹಾರ ನೀಡಿದ್ದು, ಆ ಭಾಗದಲ್ಲಿ ಲೈನ್ ಎಳೆಯುವ ಕಾಮಗಾರಿ ನಡೆಯುತ್ತಿದೆ. ಮಾಡಾವು ಸಬ್‌ಸ್ಟೇಷನ್ ಕಾಮಗಾರಿ ಪೂರ್ಣಗೊಂಡ ಬಳಿಕ ಲೋಡ್ ಶೆಡ್ಡಿಂಗ್ ಸಮಸ್ಯೆ ಬರುವುದಿಲ್ಲ .ವೋಲ್ಟೇಜ್ ಸಮಸ್ಯೆಯೂ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ಮೊಟ್ಟೆತ್ತಡ್ಕದ ಟ್ರಾನ್ಸ್‌ಫಾರ್ಮರ್ ಕೇಬಲ್ ಬದಲಾವಣೆ ಹಾಗೂ ದುರಸ್ತಿ ಕಾರ್ಯಗಳಿಗಾಗಿ ರೂ.5 ಲಕ್ಷ ಅನುದಾನ ನೀಡಲಾಗಿದ್ದು, ಈ ಕೆಲಸವನ್ನು ಕೂಡಲೇ ಮಾಡಲಾಗುವುದು. ಈ ಭಾಗದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಪುತ್ತೂರು ನಗರಸಭೆಯ ನಾಮನಿರ್ದೇಶಿತ ಸದಸ್ಯ ದಿಲೀಪ್ ಮೊಟ್ಟೆತ್ತಡ್ಕ, ಉಮೇಶ್ ಡಿ.ಕೆ, ವೇಣುಗೋಪಾಲ್, ಅಬ್ದುಲ್ಲಾ ಕೆ, ಕೃಷ್ಣ ಭಟ್, ತಮ್ಮಣ್ಣ ರೈ, ಇಸ್ಮಾಯಿಲ್, ವಿಜಯ ರೈ, ಅರುಣ್‌ಕುಮಾರ್, ಇಸ್ಮಾಯಿಲ್, ಮೋಹನ್‌ಕುಮಾರ್, ಯಾಕೂಬ್, ಚೇತನ್‌ಕುಮಾರ್, ಹನೀಫ್ ಕೂರೆ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News