ತ್ರಿವಳಿ ತಲಾಖ್ ತಡೆ ಮಸೂದೆ ಜಾರಿ, ಮುಸ್ಲಿಂ ಯುವಕರನ್ನು ಜೈಲಿಗಟ್ಟುವ ಷಡ್ಯಂತ್ರ-ಎ.ಕೆ. ಅಶ್ರಫ್

Update: 2018-02-14 17:53 GMT

ಪುತ್ತೂರು, ಫೆ. 14: ಕೇಂದ್ರ ಸರ್ಕಾವರವು ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸುವ ಮೂಲಕ ಮುಸ್ಲಿಂ ಪತಿ, ಪತ್ನಿಯರ ನಡುವೆ ವೈಷಮ್ಯ ನಿರ್ಮಿಸು ವುದರ ಜೊತೆಗೆ ಮುಸ್ಲಿಂ ಯುವಕರನ್ನು ಜೈಲಿಗಟ್ಟುವ ಷಡ್ಯಂತ್ರವನ್ನು ಮಾಡುತ್ತಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳ ಮೇಲೆ ನಡೆಸುತ್ತಿರುವ ಇಂತಹ ದಾಳಿಯನ್ನು ತಕ್ಷಣವೇ ಸರ್ಕಾರ ನಿಲ್ಲಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಎ.ಕೆ. ಅಶ್ರಫ್ ಆಗ್ರಹಿಸಿದರು.

ಅವರು ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಬುಧವಾರ ಸಂಜೆ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ನಡೆದ ‘ವೈಯಕ್ತಿಕ ಕಾನೂನುಗಳ ಮೇಲಿನ ದಾಳಿಯನ್ನು ನಿಲ್ಲಿಸಿ’ ಎಂಬ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ದೇಶದ ನ್ಯಾಯಾಲಯ ಈ ಹಿಂದೆಯೇ ಹೇಳಿದೆ. ಅದರೊಂದಿಗೆ ಇಸ್ಲಾಂ ಧರ್ಮವೂ ಏಕಕಾಲದಲ್ಲಿ ನೀಡುವ ತ್ರಿವಳಿ ತಲಾಖ್‌ಗೆ ಮಾನ್ಯತೆ ನೀಡಿಲ್ಲ. ಭಾರತೀಯ ಪ್ರತಿಯೊಂದು ಮಹಿಳೆಗೆ ಅನ್ಯಾಯ ಆದಾಗ ನ್ಯಾಯ ನೀಡುವ ಕಾನೂನು ದೇಶದಲ್ಲಿದೆ. ಈ ದೇಶದ ಮುಸ್ಲಿಂ ಮಹಿಳೆಯರು ದೇಶವನ್ನು ಪ್ರೀತಿಸುವಂತೆ ಶರೀಅತ್‌ನ್ನೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಆದರೂ ಕೇವಲ ಮುಸ್ಲಿಂ ಪುರಷರನ್ನು ಜೈಲಿ ಗಟ್ಟಬೇಕು ಎಂಬ ಉದ್ದೇಶದಲ್ಲಿ ಕೇಂದ್ರದ ಮೋದಿ ಸರ್ಕಾರ ಈ ಮಸೂದೆ ಜಾರಿಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಮೋದಿಯವರಿಗೆ ನಿಜವಾಗಿ ಮಹಿಳೆಯರ ಬಗ್ಗೆ ಕಾಳಜಿಯಿದ್ದಲ್ಲಿ ಅವರ ಪತ್ನಿಗೆ ನ್ಯಾಯ ಒದಗಿಸಿಕೊಡಲಿ. ರಾಜ್ಯದ ಬಿಜೆಪಿ ಮುಖಂಡರಾದ ಹರತಾಳ ಹಾಲಪ್ಪ, ರೇಣುಕಾಚಾರ್ಯ, ಯಡಿಯೂರಪ್ಪ ಅವರಿಗೆ ಸಂಸ್ಕೃತಿಯನ್ನು ಕಲಿಸಿಕೊಡಲಿ. ಮುಸ್ಲಿಮರ ಮತ ಪಡೆದು ಅಧಿಕಾರ ಪಡೆಯುವ ಕಾಂಗ್ರೆಸ್ ಪಕ್ಷವು ರಾಜ್ಯಸಭೆಯಲ್ಲಿ ಒತ್ತಡ ತರುವ ಮೂಲಕ ಈ ಮಸೂದೆಯನ್ನು ವಿರೋಧಿಸಬೇಕು ಎಂದು ಹೇಳಿದರು.
ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಸ್ವಾಧಿಕ್ ಮುಸ್ಲಿಯಾರ್ ಮಾತನಾಡಿ ದೇಶದಲ್ಲಿ ಮುಸ್ಲಿಮರ ಬೇಟೆ ನಡೆಸುವ ಉದ್ದೇಶದಲ್ಲಿ ಈ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದ್ದು, ಸಂವಿಧಾನ ವಿರೋಧಿ ಕಾನೂನು ಜಾರಿಗೊಳಿಸಲು ಮುಂದಾದಲ್ಲಿ ಪ್ರಾಣತ್ಯಾಗಕ್ಕೂ ಮುಸ್ಲಿಂ ಸಮುದಾಯ ಸಿದ್ದವಿದೆ.
ದೇಶದಲ್ಲಿ 9 ಕೋಟಿ ಮುಸ್ಲಿಂ ಮಹಿಳೆಯರಿದ್ದಾರೆ. ಆದರೆ ಅವರು ಯಾರೂ ತಲಾಖ್ ಬಗ್ಗೆ ಅಪಸ್ವರವೆತ್ತಿಲ್ಲ. ಆರ್‌ಎಸ್‌ಎಸ್‌ನ ಐವರು ಮುಸ್ಲಿಂ ಹೆಸರಿನ ಮಹಿಳೆಯರು ಪ್ರಶ್ನಿಸಿದರೆಂಬ ಕಾರಣವನ್ನು ಮುಂದಿಟ್ಟು ಮಸೂದೆ ತರಲು ಮುಂದಾಗಿರುವ ಮೋದಿ ಅವರ ಮಾತು ಮತ್ತು ಕೃತಿಯಲ್ಲಿ ವೈರುದ್ಯವಿದೆ. ಇದನ್ನು ತಡೆಯಬೇಕಾಗಿರುವ ಕಾಂಗ್ರೆಸ್ ಮೌನವಾಗಿದೆ ಎಂದು ದೂರಿದರು.
ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಸಿದ್ದಿಕ್ ಪುತ್ತೂರು, ತಾಲೂಕು ಅಧ್ಯಕ್ಷ ಹಮೀದ್ ಮೆಜೆಸ್ಟಿಕ್, ಉಪಾಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಹಂಝ ಅಫ್ನಾನ್, ಪ್ರಮುಖರಾದಆನಂದ ಮಿತ್ತಬೈಲು, ಹಮೀದ್ ಸಾಲ್ಮರ, ಬಾತಿಷಾ ಬಡೆಕ್ಕೋಡಿ, ಎಂ.ಎ. ರಫೀಕ್, ಜಾಬಿರ್ ಅರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ:14ಪಿಟಿಆರ್-ಎಸ್‌ಡಿಪಿಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News