ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಸಂವಿಧಾನ ಅಪಾಯದಲ್ಲಿ: ಡಾ. ಖಾದರ್ ಮಾಂಗಾಡ್

Update: 2018-02-14 18:00 GMT

ಮಂಜೇಶ್ವರ, ಫೆ. 14: ಭಾರತವು ಹಿಂದೆಂದೂ ಕಾಣದ ಕರಾಳ ಫ್ಯಾಸಿಸಮ್ ನ ಭೀತಿಯಲ್ಲಿದೆಯೆಂದೂ, ಫ್ಯಾಸಿಸ್ಟ್ ಮನೋಸ್ಥಿತಿಯ ಜನರ ಕೈಗಳಲ್ಲಿ ಸಂವಿಧಾನವು ಸುರಕ್ಷಿತವಲ್ಲವೆಂದೂ ಕಣ್ಣೂರು ವಿಶ್ವ ವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಖಾದರ್ ಮಾಂಗಾಡ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸಂಸ್ಕಾರ ಸಾಹಿತಿ ಅಸೆಂಬ್ಲಿ ಸಮಿತಿಯ ಜಂಟಿ ಆಶ್ರಯದಲ್ಲಿ ಹೊಸಂಗಡಿ ಗೇಟ್ ವೇ ಹಾಲ್ ನಲ್ಲಿ ಜರುಗಿದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.

ಬ್ರಿಟಿಷರು ಗಾಂಧೀಜಿಯವರನ್ನು ಮೂವತ್ತು ವರ್ಷಗಳಷ್ಟು ಕಾಲ ಸಹಿಸುವ ಸಹನೆ ತೋರಿಸಿದರೂ , ಅಸಹಿಷ್ಣುತೆಯ ವಿಷವನ್ನು ನರನಾಡಿಗಳಲ್ಲಿ ತುಂಬಿಕೊಂಡ ಜನರು ಅವರನ್ನು ಕನಿಷ್ಠ ಆರು ತಿಂಗಳು ಕೂಡಾ ಸಹಿಸಲು ಮನಸ್ಸು ಮಾಡಲಿಲ್ಲ ಎಂಬುದು ಫ್ಯಾಸಿಸಮ್ ನ ವಿಕೃತ ಮುಖವನ್ನು ಅನಾವರಣಗೊಳಿಸುತ್ತದೆ. ಓರ್ವ ಆಸ್ತಿಕ ಹಿಂದೂವಾದರೂ , ಪರಮತ ಸಹಿಷ್ಣುವಾದುದು, ತುಳಿತಕ್ಕೊಳಗಾದ ಜನರ ಪರವಾಗಿ ದ್ವನಿಯೆತ್ತಿದ್ದು, ಅನಾಚಾರಗಳನ್ನು ಸಾತ್ವಿಕವಾಗಿ ವಿರೋಧಿಸಿದುದು ಅವರ ಪ್ರಾಣಕ್ಕೆ‌ ಎರವಾಯಿತು. ಜನತೆಯ ಮೆದುಳು ತಮ್ಮ ಇಚ್ಛೆಯಂತೆ ಕಾರ್ಯಾಚರಿಸಬೇಕೆಂಬುದು ಫ್ಯಾಸಿಸ್ಟರ ಅಭಿಲಾಷೆ. ಮಾತು, ಕೃತಿ, ಆಹಾರ, ಉಡುಗೆ, ಧಾರ್ಮಿಕ ವಿಶ್ವಾಸ, ರಾಜಕೀಯ ಚಿಂತನೆ, ಎಲ್ಲವೂ ತಮ್ಮ ಆಜ್ಞೆಯಂತಿರಬೇಕೆಂಬ ಈ ಶಕ್ತಿಗಳ ಇಂಗಿತಕ್ಕೆ ತಲೆಬಾಗದವರು ನಿಷ್ಕರುಣೆಯಿಂದ ಕೊಲೆಗೀಡಾಗುತ್ತಾರೆ. ಸಾಂವಿಧಾನಿಕ ಸಂಸ್ಥೆಗಳು, ಕಾನೂನುಗಳು, ನ್ಯಾಯಾಲಯಗಳು, ಎಲ್ಲವನ್ನೂ ತಮಗೆ ಅನುಕೂಲವಾಗುವಂತೆ ಪರಿವರ್ತಿಸುವ ಹೀನ ಕಾರ್ಯಕ್ಕೆ ಮುಂದಾಗಲು ಹೇಸದ ಈ‌ಶಕ್ತಿಗಳಿಂದಾಗಿ ರಾಷ್ಟ್ರದ ಸಂವಿಧಾನ ಕೂಡಾ ಅಪಾಯದಲ್ಲಿದೆಯೆಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಎಂಬ ಮೂಲಭೂತ ವಾಸ್ತವವನ್ನು ಅರಿಯದಿರು ವುದು ಮತ್ತು ಅಂಗೀಕರಿಸದಿರುವುದು ಈ ಶಕ್ತಿಗಳ ಮೊಂಡುತನವಾಗಿದೆ. ರಾಷ್ಟ್ರ ಪಿತನನ್ನು ಕೊಂದು ಪಿತೃ ಹಂತಕರಾಗಲು ಹೇಸದ ಈ ಶಕ್ತಿಯನ್ನು ಸಂಘಟಿತ ಹೋರಾಟದ ಮೂಲಕ ಹಿಮ್ಮೆಟ್ಟಿಸಬೇಕಾಗಿದೆಯೆಂದು ಅವರು ಹೇಳಿದರು.

ಗಾಂಧೀಜಿಯ  ಹತ್ಯೆಯ ನಂತರ ಅದಕ್ಕೆ ಸರಿಸಮಾನವಾದ ಒಂದು ವ್ಯಕ್ತಿತ್ವ ಈ ಜಗತ್ತಿನಲ್ಲಿ ಹುಟ್ಟಿ ಬಂದಿಲ್ಲ ಎನ್ನುವುದು ಗಾಂಧೀಜಿಯವರ ಉನ್ನತಿಯನ್ನು ಸಾರುವ ಅಂಶವಾಗಿದೆ. ಗಾಂಧೀಜಿಯವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿವೆ.ಅವರ ಚಿಂತನೆಯಂತೆ ಮುನ್ನಡೆಯುವುದೇ ದೇಶದ ಒಳಿತಿಗೆ ಪೂರಕವಾದ ಅಂಶವಾಗಿದೆಯೆಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮದಲ್ಲಿ ನೇತಾರರಾದ ಸೋಮಶೇಖರ ಜೆ.ಎಸ್. ರಾಘವನ್ ಕುಳಂಗರ ,  ಸತೀಶ್ ಅಡಪ್ಪ ಸಂಕಬೈಲ್ ,  ಮಮತಾ ದಿವಾಕರ್, ಶಂಷಾದ್ ಶುಕೂರ್, ಶಶಿಕಲಾ,ಸುನೀತಾ ಡಿ ಸೋಜಾ, ಸತ್ಯನ್ ಸಿ ಉಪ್ಪಳ, ಮುಹಮ್ಮದ್ ಮಜಾಲ್, ನಾಸರ್ ಮೊಗ್ರಾಲ್, ಶಾಂತಾ ಆರ್ ನಾಯ್ಕ್, ಇಬ್ರಾಹಿಂ ಐ ಆರ್ ಡಿ ಪಿ ,  ಕಂಚಿಲ ಮುಹಮ್ಮದ್, ಗುರುವಪ್ಪ ಮಂಜೇಶ್ವರ, ದಿವಾಕರ ಎಸ್ ಜೆ, ಸದಾಶಿವ ಕೆ, ಕಾಯಿಂಞಿ ಹಾಜಿ, ದಾಮೋದರ ಮಾಸ್ಟರ್, ನಾಗೇಶ್ ಮಂಜೇಶ್ವರ, ಮಂಜುನಾಥ ಪ್ರಸಾದ್ ರೈ, ಶೋಭಾ ಸೋಮಪ್ಪ, ಫಾತಿಮತ್ ಝೌರಾ, ಚಂದ್ರಾವತಿ, ಸೀತಾ ಡಿ, ಶರೀಫ್ ಅರಿಬೈಲ್, ಮಹಮ್ಮದ್ ಬಿ.ಕೆ, ಎಸ್ ಅಬ್ದುಲ್ ಖಾದರ್ ಹಾಜಿ,  ಏದಾರ್, ರಮೇಶ್ ಎಂ.ಕೆ., ಸಲೀಂ, ಪ್ರದೀಪ್ ಶೆಟ್ಟಿ, ಸುಧಾಕರ ಯು, ಹಮೀದ್ ಕಣಿಯೂರು , ರಶೀದ್ ಓ ಎಂ. ಕರಿಯ್ಯಾಮಂಜೇಶ್ವರ, ಮಹಮ್ಮದ್ ನೈನಾರ್, ಪ್ರಶಾಂತಿ , ಉಮೇಶ್ ಶೆಟ್ಟಿ ಮುಂತಾದವರು ಮಾತನಾಡಿದರು. ಜಗದೀಶ್ ಮೂಡಂಬೈಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News