ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿದ ಯೋಧರ ತಂಡದಲ್ಲಿ ದ.ಕ. ಜಿಲ್ಲೆಯ ಝುಬೈರ್

Update: 2018-02-16 09:02 GMT

ಕಡಬ, ಫೆ.16: ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ನಮ್ಮ ತುಳುನಾಡಿನ ಯೋಧರೊಬ್ಬರು ಇದ್ದಾರೆ.

ಅವರೇ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಕಡಬ ತಾಲೂಕಿನ ಆತೂರು ಸಮೀಪದ ಬಜತ್ತೂರು ಗ್ರಾಮದ ನೇರೆಂಕಿಯ ಮೇಲೂರು ನಿವಾಸಿ ಸಮೂನ್ ಬ್ಯಾರಿ ಹಾಗೂ ಆಮಿನಮ್ಮ ದಂಪತಿಯ ದ್ವಿತೀಯ ಪುತ್ರ ಝುಬೈರ್ ಎಂ. ನೇರಂಕಿ. 

ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿಯಲ್ಲಿ ಪಡೆದ ಅವರು ಪ್ರೌಢ ಶಿಕ್ಷಣವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯು ಹಾಗೂ ಬಿ.ಬಿ.ಎಂ ವ್ಯಾಸಂಗವನ್ನು ಮುಗಿಸಿ ದೇಶಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡರು.

ಸಿ.ಆರ್.ಪಿ.ಎಫ್. ಯೋಧರಾಗಿರುವ ಝುಬೈರ್ ನಾಲ್ಕು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕರಣ್ ನಗರಕ್ಕೆ ನುಗ್ಗಿದ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕೆಲ ಉಗ್ರರು ಒಳನುಗ್ಗಿ ಅಲ್ಲಿದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಂತಹ ಸನ್ನಿವೇಶದಲ್ಲೂ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡದ ಭಾರತದ ಸಿ.ಆರ್.ಪಿ.ಎಫ್ ಯೋಧರು ಎಲ್ಲಾ ದಾಳಿಗಳನ್ನು ಎದುರಿಸಿ ನಿಂತು ತಕ್ಕ ಉತ್ತರ ನೀಡುವ ಮೂಲಕ ಭಯೋತ್ಪಾದಕರನ್ನು ಸದೆ ಬಡಿದಿದ್ದರು.

ಈ ಬಗ್ಗೆ ಝುಬೈರ್ ತನ್ನ ಫೇಸ್ ಬುಕ್ ವಾಲ್ ನಲ್ಲಿ ವೀಡಿಯೊ ಒಂದನ್ನು ಅಪ್ ಲೋಡ್ ಮಾಡಿದ್ದು, ಅದು ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಝುಬೈರ್ ಬಗ್ಗೆ ಪ್ರಶಂಸೆಯ ಮಹಾಪೂರಗಳೇ ಹರಿದು ಬರುತ್ತಿವೆ. ಒಟ್ಟಿನಲ್ಲಿ ಭಯೋತ್ಪಾದಕರನ್ನು ಸದೆಬಡಿಯುವ ಯೋಧರಲ್ಲಿ ಓರ್ವರು ನಮ್ಮ ಕರಾವಳಿಯವರು ಎಂಬುವುದೇ ಹೆಮ್ಮೆಯ ವಿಚಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News