ಆ್ಯಂಬುಲೆನ್ಸ್ ನೀಡದ ಆಸ್ಪತ್ರೆ: ಬೈಕ್ ನಲ್ಲಿ ಬಾಲಕನ ಮೃತದೇಹ ಸಾಗಿಸಿದ ಪೋಷಕರು !

Update: 2018-02-16 07:16 GMT

ಸಂಭಲ್ (ಉತ್ತರ ಪ್ರದೇಶ), ಫೆ. 16: ಸಂಭಲ್ ಎಂಬಲ್ಲಿನ ಸರಕಾರಿ ಆಸ್ಪತ್ರೆಯೊಂದು ಆ್ಯಂಬುಲೆನ್ಸ್ ಒದಗಿಸಲು ನಿರಾಕರಿಸಿದ ಕಾರಣ ದುರ್ಘಟನೆ ಯೊಂದರಲ್ಲಿ ಮೃಪಟ್ಟ ಬಾಲಕನೊಬ್ಬನ ಮೃತದೇಹವನ್ನು ಸಂಬಂಧಿಗಳು ಮೋಟಾರ್ ಸೈಕಲ್ ನಲ್ಲಿ ಮನೆಗೆ ತೆಗೆದುಕೊಂಡು ಹೋದ ಘಟನೆ ವರದಿಯಾಗಿದೆ.

ತಾತನ ಜತೆ ತೋಟದಲ್ಲಿದ್ದಾಗ ನಡೆದ ದುರ್ಘಟನೆಯೊಂದರ ನಂತರ ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಸಂಬಂಧಿಗಳು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಬಾಲಕ ಅದಾಗಲೇ ಮೃತಪಟ್ಟಿದ್ದಾನೆಂದು ಘೋಷಿಸಿದ ವೈದ್ಯರು ಮೃತದೇಹವನ್ನು ಕೂಡಲೇ ಆಸ್ಪತ್ರೆಯಿಂದ ಸಾಗಿಸುವಂತೆ ಹೇಳಿದ್ದರೆನ್ನಲಾಗಿದೆ. ಆಸ್ಪತ್ರೆಯಿಂದ ಹೊರಗೆ ಮೃತದೇಹವನ್ನು ಸಾಗಿಸಲು ಸ್ಟ್ರೆಚರ್ ಒದಗಿಸದೇ ಇದ್ದ ಕಾರಣ ಹೆಗಲಲ್ಲಿ ಮೃತದೇಹವನ್ನು ಹೊತ್ತು ತಂದು ನಂತರ ಆ್ಯಂಬುಲೆನ್ಸ್ ನೀಡದೇ ಇದ್ದ ಕಾರಣ ಬೈಕ್ ನಲ್ಲಿ ಮನೆಗೆ ಸಾಗಿಸಲಾಯಿತೆಂದು ಬಾಲಕನ ಸಂಬಂಧಿಕರೊಬ್ಬರು ಮಾಹಿತಿ ನೀಡಿದ್ದಾರೆ.

ಆದರೆ ಆಸ್ಪತ್ರೆ ಆಡಳಿತ ಮಾತ್ರ ಇದನ್ನು ನಿರಾಕರಿಸಿದ್ದು, ಬಾಲಕನ ಕುಟುಂಬವು ಸಂಬಂಧಿತ ಪ್ರಕ್ರಿಯೆಯನ್ನು ಪೂರ್ತಿಗೊಳಿಸದೆ ಯಾರಿಗೂ ಮಾಹಿತಿ ನೀಡದೆ ಮೃತದೇಹವನ್ನು ಕೊಂಡೊಯ್ದಿದ್ದಾಗಿ ಹೇಳಿದೆ.

‘‘ಬಾಲಕನನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂತು. ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಿರುವಾಗಲೇ ಸಂಬಂಧಿಗಳು ಮೃತದೇಹವನ್ನು ಕೊಂಡು ಹೋದರು. ಅವರು ನಮಗೆ ತಿಳಿಸಿದ್ದರೆ ಖಂಡಿತವಾಗಿಯೂ ಆ್ಯಂಬುಲೆನ್ಸ್ ಒದಗಿಸುತ್ತಿದ್ದೆವು,’’ಎಂದು ಡಾ. ಅಮೃತಾ ಸಿನ್ಹ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News