×
Ad

ನೀರವ್ ಮೋದಿ, ಕುಟುಂಬ ಸದಸ್ಯರ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿ

Update: 2018-02-16 14:06 IST

ಮುಂಬೈ, ಫೆ. 16: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ರೂ 11,300 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಥಾನ ದಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ, ಆತನ ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಹಾಗೂ ಉದ್ಯಮ ಪಾಲುದಾರ ಮತ್ತು ಮಾವ ಮೆಹುಲ್ ಚೊಕ್ಸಿ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಿದೆ.

ಮುಂಬೈಯ ಕಾಲಾ ಘೋಡ ಪ್ರದೇಶದಲ್ಲಿ ನೀರವ್ ಮೋದಿ ಒಡೆತನದ ಬುಟೀಖ್ ಒಂದರ ಮೇಲೆ ದಾಳಿ ಶುಕ್ರವಾರವೂ ಮುಂದುವರಿದಿದೆ. ಸಿಬಿಐ ಈಗಾಗಲೇ ನೀರವ್ ಮೋದಿ ಹಾಗೂ ಆತನ ಪಾಲುದಾರ ಮೆಹುಲ್ ಚೊಕ್ಸಿಯ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕೋರಿದೆ. ಈತನ್ಮಧ್ಯೆ ಈ ಭಾರೀ ಅವ್ಯವಹಾರದ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶುಕ್ರವಾರ 8 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇಲ್ಲಿಯ ತನಕ ಈ ಅವ್ಯವಹಾರ ಸಂಬಂಧ ವಜಾಗೊಂಡಿರುವ ಉದ್ಯೋಗಿಗಳ ಸಂಖ್ಯೆ 18ಕೇರಿದೆ. ಬ್ಯಾಂಕಿನ ಜನರಲ್ ಮ್ಯಾನೇಜರ್ ಹಂತದ ಅಧಿಕಾರಿಗಳೂ ವಜಾಗೊಂಡವರಲ್ಲಿ ಸೇರಿದ್ದಾರೆ.

ಭಾರತೀಯ ಪಾಸ್ ಪೋರ್ಟ್ ಹೊಂದಿದ ನೀರವ್ ಮೋದಿ ಜನವರಿ 1ರಂದು ಭಾರತ ಬಿಟ್ಟು ತೆರಳಿದ್ದರೆ ಆತನ ಸೋದರ, ಬೆಲ್ಜಿಯಂ ಪೌರತ್ವ ಹೊಂದಿರುವ ನಿಶಾಲ್ ಕೂಡ ಅದೇ ದಿನ ದೇಶ ಬಿಟ್ಟು ತೆರಳಿದ್ದಾರೆ. ಅವರಿಬ್ಬರೂ ಒಟ್ಟಿಗೆ ತೆರಳಿದ್ದರೆಯೇ ಎಂಬುದು ತಿಳಿದು ಬಂದಿಲ್ಲ. ನೀರವ್ ಮೋದಿಯ ಪತ್ನಿ ಅಮಿ ಅಮೆರಿಕನ್ ಪೌರತ್ವ ಹೊಂದಿದ್ದು, ಜನವರಿ 6ರಂದು ತೆರಳಿದ್ದರೆ ಮೆಹುಲ್ ಜನವರಿ 4ರಂದು ತೆರಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಅವ್ಯವಹಾರದ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ದಾಖಲಿಸಲು ವಿಳಂಬಿಸಿರುವುದರಿಂದ ಆರೋಪಿಗಳು ದೇಶ ಬಿಟ್ಟು ತೆರಳು ವಂತಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಆರೋಪಿಗಳ ಕಂಪೆನಿಗಳಾದ ಡೈಮಂಡ್ ಆರ್ ಯುಎಸ್, ಸೋಲಾರ್ ಎಕ್ಸ್ ಪೋರ್ಟ್ಸ್ ಹಾಗೂ ಸ್ಟೆಲ್ಲಾರ್ ಡೈಮಂಡ್ಸ್ ಇವುಗಳು ಬ್ಯಾಂಕ್ ಅನ್ನು ಸಂಪರ್ಕಿಸಿ ಆಮದು ದಾಖಲೆಗಳನ್ನು ಪ್ರಸ್ತುತ ಪಡಿಸಿ ಲೆಟರ್ಸ್‌ ಆಫ್ ಅಂಡರ್ ಟೇಕಿಂಗ್ ನೀಡಲು ಕೋರಿದಾಗ ತನಗೆ ಸಂಶಯ ಉಂಟಾಗಿತ್ತು ಎಂದು ಬ್ಯಾಂಕ್ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News