ಫೆ. 20ರಂದು ಸಿಪಿಎಂನಿಂದ ಮಂಗಳೂರು ನಗರ ಪಾಲಿಕೆ ಚಲೋ
ಮಂಗಳೂರು, ಫೆ. 16: ಕುಡ್ಸೆಂಪ್ ಯೋಜನೆಯ ಒಳಚರಂಡಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದರ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಸಿಪಿಎ ಮಂಗಳೂರು ನಗರ ಉತ್ತರ, ದಕ್ಷಿಣ ಸಮಿತಿ ನೇತೃತ್ವದಲ್ಲಿ ಫೆ. 20ರಂದು ನಗರ ಪಾಲಿಕೆ ಚಲೋ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ವಿಕಾಸ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಡಿಬಿಯ ಪ್ರಥಮ ಹಂತದ 360 ಕೋಟಿ ರೂ.ಗಳ ಯೋಜನೆ ಕಳಪೆಯಾಗಿ ಸಾರ್ವಜನಿಕರ ಹಣ ಪೋಲಾಗಿದೆ. ಅಲ್ಲಿ ಆಗಿರುವ ಭ್ರಷ್ಟಾಚಾರ ತನಿಖೆ ನಡೆಯುವ ಮೊದಲೇ ಇದೀಗ ಎಡಿಬಿ ದ್ವಿತೀಯ ಹಂತಕ್ಕಾಗಿ ಅಮೃತ್ ಯೋಜನೆ ಸೇರಿದಂತೆ ಮತ್ತೆ ನೂರಾರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದು, ಅಲ್ಲಿಯೂ ಭ್ರಷ್ಟಾಚಾರದ ಅನುಮಾನವಿದೆ. ಹಾಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮಂಗಳೂರಿನ ಹೃದಯ ಭಾಗದಲ್ಲಿ 70ರ ದಶಕದಲ್ಲಿ ಅಳವಡಿಸಿರುವ ಒಳಚರಂಡಿಯ ಮುಖ್ಯ ಪಂಪಿಂಗ್ ಲೈನ್ ಬದಲಾಯಿಸುವ ಯೋಜನೆಗೆ ಆರಂಭದಲ್ಲಿ 60 ಕೋಟಿ ರೂ. ಅಂದಾಜಿಸಲಾಗಿತ್ತು. ಇದೀಗ ಯೋಜನೆಯ ಮೊತ್ತ 94 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಮೂಲ ಅಂದಾಜು ವೆಚ್ಚ ಕೇವಲ ಎರಡು ವರ್ಷಗಳಲ್ಲಿ ಶೇ. 60ರಷ್ಟು ಏರಿಕೆಯಾಗಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಕಾರಣವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುವಂತೆ ಎಸ್ ಆರ್ ದರದ ಹೆಚ್ಚಳ (ನಿಗದಿತ ದರ)ದಿಂದಾಗಿ ಈ ಏರಿಕೆ ಎಂದಾದರೂ ಇಷ್ಟೊಂದು ಮಟ್ಟದಲ್ಲಿ ಎರಡು ವರ್ಷಗಳಲ್ಲಿ ಏರಿಕೆಯನ್ನು ಊಹಿಸಲಾಗದು. ನಿನ್ನೆ ಮಹಾನಗರ ಪಾಲಿಕೆಯಲ್ಲಿ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ 76.15 ಕೋಟಿ ರೂ.ಗಳ ಪಂಪಿಂಗ್ ಮೇನ್ ಲೈನ್ ಬದಲಾವಣೆಗೆ 13 ಕೋಟಿ ರೂ.ಗಳನ್ನು ಸಂಬಂಧಿಕ ಕಾಮಗಾರಿಗಳಿಗೆ ಎಂದು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಮೂಲ ಯೋಜನೆಯಲ್ಲಿಯೇ ಸಂಬಂಧಿತ ಕಾಮಗಾರಿಗಳು ಒಳಗೊಳ್ಳಬೇಕಿದೆ. ಹಾಗಿರುವಾಗ ಮತ್ತೆ ಹೆಚ್ಚುವರಿ ಹಣ ಮೀಸಲಿಡುವ ಅಗತ್ಯವೇ ಬರುವುದಿಲ್ಲ. ಇ ಟೆಂಡರ್‌ನಲ್ಲಿ ಎರಡು ಕಂಪನಿಗಳು ಮಾತ್ರವೇ ಭಾಗವಹಿಸಿರುವುದು ಕೂಡಾ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆಯಾಗಲಿ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಎಡಿಬಿ ಪ್ರಥಮ ಹಂತದ ಸಾಲದ ಹಣವನ್ನು ತೀರಿಸುವ ನಿಟ್ಟಿನಲ್ಲಿ ಈಗಾಗಲೇ ನಗರದ ಜನರಿಗೆ ತೆರಿಗೆ ಹೆಚ್ಚಳ ರೂಪದಲ್ಲಿ ಅದರ ಹೊರೆಯನ್ನು ಹೊರಿಸಲಾಗಿದೆ. ಪ್ರತಮ ಹಂತದ ಎಡಿಬಿ ಯೋಜನೆಯ ಭ್ರಷ್ಟಾಚಾರ ಒಪ್ಪಿಕೊಂಡು ಸಿಐಡಿ ತನಿಖೆಯ ಭರವಸೆಯನ್ನು ಸಚಿವ ರೋಶನ್ ಬೇಗ್ ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಇದೀಗ ಮತ್ತೆ ಎಡಿಬಿ ಎರಡನೆ ಹಂತದಲ್ಲಿ ಮತ್ತೆ ಸುಮಾರು 400 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಆದರೆ ಈ ಸಾಲ ಹಣ ಪಾವತಿಗೆ ಸಂಬಂಧಿಸಿ ಎಡಿಬಿ ವಿಧಿಸಿರುವ ಷರತ್ತುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗಿಲ್ಲ. ಹೀಗಾಗಿ ಜನರ ತೆರಿಗೆ ಹಣವನ್ನು ದೋಚುವ ಲಾಬಿಗಳನ್ನು ಬಯಲಿಗೆಳೆಯಲು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಪ್ರಥಮ ಹಂತದ ಕುಡ್ಸೆಂಪ್ ಕಾಮಗಾರಿಯ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ದ್ವಿತೀಯ ಹಂತದ ಕಾಮಗಾರಿಯಿಂದ ದೂರವಿಡಬೇಕೆಂಬ ಆಗ್ರಹವೂ ತವ್ಮುದಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ಸಾದಿಕ್ ಕಣ್ಣೂರು ಉಸ್ಥಿತರಿದ್ದರು.