×
Ad

ಪ್ರತಿಭಾ ಕುಳಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ: ಶರತ್ ತಂದೆ

Update: 2018-02-16 19:43 IST

ಬಂಟ್ವಾಳ, ಫೆ. 16: "ಮಗನ ಸಾವಿನ ಬಗ್ಗೆ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ಹೇಳಿಕೆ ಖಂಡನೀಯ. ಈ ಬಗ್ಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಶರತ್ ಮಡಿವಾಳರ ತಂದೆ ಎನ್. ತನಿಯಪ್ಪ ಮಡಿವಾಳ ಹೇಳಿದ್ದಾರೆ.

ಶುಕ್ರವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಮಗನ ಹತ್ಯೆಯ ಸಂದರ್ಭ ಧ್ವನಿಯೆತ್ತದ ಪ್ರತಿಭಾ ಅವರು, ಇದೀಗ ರಾಜಕೀಯ ಲಾಭಕ್ಕಾಗಿ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ತನ್ನ ಮಗನ ಸಾವಿನ ಹೆಸರಿನಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಬೇಡ ಎಂದು ಹೇಳಿದರು.

ಮಗನ ಹತ್ಯೆಯಾಗಿ 8 ತಿಂಗಳಾದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಅಲ್ಲದೆ, ಪೊಲೀಸ್ ಇಲಾಖೆಯು ತನ್ನನ್ನು ಹಾಗೂ ಆತನ ಸ್ನೇಹಿತರನ್ನು ವಿಚಾರಣೆ ಮಾಡಿಲ್ಲ. ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಹಂತಕರನ್ನು ಬಂಧಿಸುವ ಭರವಸೆ ನೀಡಿದ್ದರು. ಆದರೆ ಸರಕಾರ ಅವರನ್ನು ವರ್ಗಾವಣೆ ಮಾಡುವ ಮೂಲಕ ಪ್ರಕರಣ ಹಳ್ಳ ಹಿಡಿಯುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.

ಪ್ರತಿಭಾ ಕುಳಾಯಿ ಅವರು, ಕಾಂಗ್ರೆಸ್ ಸಮಾವೇಶದಲ್ಲಿ ತನ್ನ ಮಗನ ಸಾವನ್ನು ರಾಜಕೀಯಕ್ಕಾಗಿ ಬಳಸಿದ್ದರಲ್ಲದೆ,  ಯಾರಿಗೆಲ್ಲ ಸಾಯಲು ಮನಸ್ಸಿದೆ ಅವರು ಸಂಘ ಪರಿವಾರ ಸೇರಿ, ದುಡಿಯಲು ಮನಸ್ಸಿಲ್ಲದವರು ಸಂಘ ಪರಿವಾರ ಸೇರಿ ಎಂದು ಹೇಳಿಕೆ ನೀಡಿದರಲ್ಲದೆ, ಸಂಘಪರಿವಾರ ತಮ್ಮ ಕುಟುಂಬಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ತನಿಯಪ್ಪ ಹೇಳಿದರು.

ಮಗನ ಸಾವಿನ ನೋವಿನೊಂದಿಗೆ ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಅವರು ತಮ್ಮ ಜೊತೆಗಿದ್ದು, ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದ ಅವರು, ತನ್ನ ಮಗನ ಸಾವಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಕಾಶ್ ಶೆಟ್ಟಿ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದರು.

ಅಶ್ರಫ್ ಕಳಾಯಿ ತನ್ನ ಗ್ರಾಹಕ

ಸಚಿವರ ಬಟ್ಟೆಯನ್ನು ತನ್ನ ಕೈಯಾರೆ ಶುಚಿ ಮಾಡಿಕೊಟ್ಟಿದೇನೆ. ಆದರೆ ಮಗನ ಸಾವಿನ ಬಗ್ಗೆ ಯಾಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಅಶ್ರಫ್ ಕಳಾಯಿ ಅವರು ಬಟ್ಟೆ ಡೋಬಿ ಮಾಡಲು ತಮ್ಮ ಅಂಗಡಿಗೆ ಬರುತ್ತಿದ್ದರು. ಹತ್ಯೆಯಾಗುವ ದಿನಗಳ ಹಿಂದೆ ಶುಚಿ ಮಾಡಿದ ಬಟ್ಟೆಗಳನ್ನು ಕೊಂಡುಹೋಗಿದ್ದು, ಅಶ್ರಫ್ ತನ್ನ ಗ್ರಾಹಕ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಶರತ್ ತಾಯಿ ನಳಿನಿ, ಸ್ನೇಹಿತ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News