ಕಾರ್ಕಳ: ನಾಲ್ವರು ಅಂತರ್ ಜಿಲ್ಲಾ ದರೋಡೆಕೋರರ ಬಂಧನ
ಉಡುಪಿ, ಫೆ.16: ಅಂತರ್ ಜಿಲ್ಲಾ ನಾಲ್ವರು ದರೋಡೆಕೋರರನ್ನು ಬಂಧಿಸಿರುವ ಕಾರ್ಕಳ ಪೊಲೀಸರು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬೆಳಪುವಿನ ಸಾಜಿದ್ ರಹ್ಮಾನ್ (19), ಕಾರ್ಕಳ ಬಂಗ್ಲೆಗುಡ್ಡೆಯ ಅಮೀರುದ್ದೀನ್ ಯಾನೆ ಸದ್ದಾಂ (27), ಭಟ್ಕಳ ಉಸ್ಮಾನ್ ನಗರದ ಮಾರೂಫ (21), ಭಟ್ಕಳ ಸೋಡಿಗದ್ದೆಯ ನಟರಾಜ ಮೊಗೇರ (24) ಬಂಧಿತ ಆರೋಪಿಗಳು.
ಫೆ.4ರಂದು ಕಾರ್ಕಳ ಬಂಗ್ಲೆಗುಡ್ಡೆಯ ಯಶೋಧ ಭಟ್ ಎಂಬವರ ಮನೆಗೆ ನುಗ್ಗಿ ಅವರಿಗೆ ಹಲ್ಲೆ ನಡೆಸಿ 21 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ರೂ. ನಗದು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುವ ವೇಳೆ ಈ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಫೆ.12ರಂದು ಸಾಜಿದ್ ಮತ್ತು ಅಮೀರುದ್ದೀನ್ ಎಂಬವರನ್ನು ಬಂಧಿಸಿ 7,500ರೂ. ನಗದು ವಶಪಡಿಸಿಕೊಂಡಿ ದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಕೃತ್ಯದಲ್ಲಿ ಇನ್ನೂ ನಾಲ್ಕು ಮಂದಿ ಭಾಗಿಯಾಗಿರುವುದಾಗಿ ಮಾಹಿತಿ ನೀಡಿದರು. ಅದರಂತೆ ಪೊಲೀಸರು ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದು, ಫೆ.15ರಂದು ಆರೋಪಿಗಳು ಕಾರ್ಕಳ ಮಾರ್ಗವಾಗಿ ಮೂಡುಬಿದಿರೆ ಕಡೆ ಹೋಗುತ್ತಿರುವ ಮಾಹಿತಿ ಅರಿತ ಪೊಲೀಸರು ಸಾಣೂರು ಮುರತಂಗಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಕಾರನ್ನು ತಡೆದು ನಿಲ್ಲಿಸಿದರು. ಈ ವೇಳೆ ಮಾರೂಫ ಹಾಗೂ ನಟರಾಜ ಎಂಬವರನ್ನು ಪೊಲೀಸರು ಬಂಧಿಸಿದರು. ಉಳಿದ ಆರೋಪಿಗಳಾದ ಕಾಪು ಅಝರುದ್ದೀನ್, ಶರೀಫ್ ಶಿವಮೊಗ್ಗ, ರಶೀದ್ ಕಾಸರಗೋಡು ಎಂಬವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 2017 ಮತ್ತು 2018ರಲ್ಲಿ ಕಾಪು, ಪಡುಬಿದ್ರೆ ಮತ್ತು ಕಾರ್ಕಳ ದಲ್ಲಿ ಮಹಿಳೆಯರ ಕುತ್ತಿಗೆಯಿಂದ ಅಪರಹರಣ ಮಾಡಿರುವ ಮೂರು ಚಿನ್ನದ ಸರಗಳು, ಕಾರ್ಕಳ ಸುಲಿಗೆ ಪ್ರಕರಣದ ಒಂದು ಚಿನ್ನದ ಸರ, ಒಂದು ಬಳೆ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಲಾಂಗು, ಕತ್ತಿ, ಕಬ್ಬಿಣದ ರಾಡು ಹಾಗೂ 6500 ರೂ. ನಗದ ಸಹಿತ ಒಟ್ಟು 8.80 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅವರಲ್ಲಿ ಕಾಪು ಅಝರುದ್ದೀನ್, ಮಾರೂಫ್ ಮತ್ತು ನಟರಾಜ ಎಂಬವರು ಇತರ ಸಹಚರರೊಂದಿಗೆ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಿಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಸಹಾಯಕ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ನೇತೃತ್ವದಲ್ಲಿ ಕಾರ್ಕಳ ನಗರ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ರಾಜೇಶ್ ಕುಂಪಲ, ಪ್ರಶಾಂತ್ ಮಣಿಯಾಣಿ, ಮೂರ್ತಿ ಕೆ., ಗಿರೀಶ್ ಉಳಿಯ, ರಾಘವೇಂದ್ರ, ಘನ ಶ್ಯಾಮ, ಭೀಮಪ್ಪ, ಚಾಲಕರಾದ ಜಗದೀಶ್, ಸತೀಶ್ ಮತ್ತು ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಹಾಗೂ ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್ ಹೆರ್ಗ, ಜಿಲ್ಲಾ ಸಿಡಿಆರ್ ಘಟಕದ ಸಿಬ್ಬಂದಿಗಳಾದ ದಿನೇಶ್ ಮತ್ತು ಶಿವಾನಂದ ಅವರು ಈ ಕಾರ್ಯಾಚರಣೆ ನಡೆಸಿದ್ದಾರೆ.